ಬೆಂಗಳೂರು,ಆ 29 (DaijiworldNews/AK): ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ಬೆಂಗಳೂರಿಗೆ ಬಂದಿದ್ದಾರೆ. ‘ಜೈಲರ್’ ಸಿನಿಮಾದ ಸಕ್ಸಸ್ ಬೆನ್ನಲ್ಲೇ ನಗರಕ್ಕೆ ತಲೈವಾ ಭೇಟಿ ನೀಡಿ ಆಶ್ಚರ್ಯವನ್ನು ಉಂಟು ಮಾಡಿದೆ. ಸಾಕಷ್ಟು ವರ್ಷಗಳ ಹಿಂದೆ ರಜನಿಕಾಂತ್ ಬೆಂಗಳೂರಿನಲ್ಲೇ ನೆಲೆಸಿದ್ದರು. ಬೆಂಗಳೂರಿಗೂ - ರಜನಿಗೂ ತುಂಬಾ ನಂಟಿದೆ.
ಚಿತ್ರರಂಗಕ್ಕೆ ಬರುವ ಮುನ್ನ ಜಯನಗರದ ಡಿಪೋದಲ್ಲಿ ಕಂಡೆಕ್ಟರ್ ಆಗಿ ತಲೈವಾ ಕಾರ್ಯ ನಿರ್ವಹಿಸಿದ್ದರು. ಇಂದು ಅಲ್ಲಿಗೆ ಭೇಟಿ ನೀಡಿ ತಮ್ಮ ಹಳೆ ನೆನಪುಗಳನ್ನ ನಟ ಸ್ಮರಿಸಿಕೊಂಡು ಖುಪಿಪಟ್ಟರು. ಅಲ್ಲದೇ ಕಂಡೆಕ್ಟರ್- ಡ್ರೈವರ್ ಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸುಮಾರು ಹತ್ತು ನಿಮಿಷಗಳ ಕಾಲ ನಟ ಬಿಎಂಟಿಸಿ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ವೈಟ್ & ವೈಟ್ ಧರಿಸಿನಲ್ಲಿ ತಲೈವಾ ಮಿಂಚಿದ್ದರು. ರಜನಿಕಾಂತ್ ಅವರನ್ನ ನೋಡಿ ಖುಷಿಯಲ್ಲಿ ಸಿಬ್ಬಂದಿಗಳು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ತಲೈವಾ ಭೇಟಿ ಜಯನಗರದ ಚಾಲಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಇನ್ನು ಬಿಎಂಟಿಸಿ ಸಿಬ್ಬಂದಿಗಳು ರಜನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಬಳಿಕ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಈ ಹಿಂದೆ ಹಲವು ಕಾರ್ಯಕ್ರಮದಲ್ಲಿ ತಾವು ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರ ಬಗ್ಗೆ ನಟ ಮಾತನಾಡಿದ್ದರು. ರೈಟ್ ರೈಟ್ ಅಂತಾ ಟಿಕೆಟ್ ಕೊಟ್ಟ ನೆನಪನ್ನ ತಲೈವಾ ಹಂಚಿಕೊಂಡರು.