ಸುಪ್ರೀತಾ ಸಾಲ್ಯಾನ್
ಮಲ್ಪೆ ವಾಸಣ್ಣ.... ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಈ ಹೆಸರು. ಮಲ್ಪೆ ವಾಸಣ್ಣ ಬರೀ ಉಡುಪಿ ಮಾತ್ರವಲ್ಲ ಇಡೀ ಕರಾವಳಿಯಲ್ಲಿಯೇ ಸಖತ್ ಫೇಮಸ್. ಇವರಿಗಿರುವ ಅಭಿಮಾನಿಗಳು ಒಂದೆರಡಲ್ಲ.. ಸಾವಿರಾರು ಅಭಿಮಾನಿಗಳನ್ನು ಇವರು ಸಂಪಾದಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅಭಿಮಾನಿಗಳನ್ನು ಸಂಪಾದಿಸಬೇಕೆಂದರೆ ಅವರಲ್ಲಿ ಏನಾದರೂ ಪ್ರತಿಭೆ ಇರಲೇಬೇಕು ಅಥವಾ ಅ ವ್ಯಕ್ತಿ ಕಲಾವಿದನಾಗಿರಬೇಕು. ಆದರೆ ಮಲ್ಪೆ ವಾಸಣ್ಣ ಕಲಾವಿದನಲ್ಲ. ಪ್ರತಿಭಾನ್ವಿತ ವ್ಯಕ್ತಿಯೂ ಅಲ್ಲ.. ಅವರೊಬ್ಬ ಸಾಮಾನ್ಯ ವ್ಯಕ್ತಿ. ಅವರದು ಮುಗ್ಧ ಮನಸ್ಸು.. ಬರೀ ಮುಗ್ಧತೆಯ ಹಾಸ್ಯದಿಂದಲೇ ಇವರು ಕರಾವಳಿಯುದ್ದಕ್ಕೂ ಚಿರಪರಿಚಿತರಾಗಿದ್ದಾರೆ.
ಹೌದು, ವಾಸು ಪೂಜಾರಿ ಮಲ್ಪೆ ಎಂದರೆ ಎಲ್ಲರಿಗೂ ಬಲು ಇಷ್ಟ. ಇಡೀ ಕರಾವಳಿಯಲ್ಲಿ ಇವರು ಟ್ರೋಲ್ ವಾಸಣ್ಣ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಟ್ರೋಲ್ ವಾಸಣ್ಣ ಮೂಲತಃ ಮಲ್ಪೆಯ ನೇಜಾರಿನವರು. ವಯಸ್ಸು 67 ವರ್ಷ. ಇಬ್ಬರು ಮಕ್ಕಳನ್ನು ಹೊಂದಿರುವ ಇವರು ಈ ಹಿಂದೆ ಮಲ್ಪೆ ಬಂದರಿನಲ್ಲಿ ಮೀನಿನ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ತೀರಾ ಬಡತನದಲ್ಲಿ ಹುಟ್ಟಿದ ವಾಸಣ್ಣ ಸದ್ಯ ಏಕಾಂಗಿಯಾಗಿಯೇ ಬಾಳ ಪಯಣ ಸಾಗಿಸುತ್ತಿದ್ದಾರೆ. ತಾನೂ ನಗುತ್ತಾ, ತನ್ನ ಜೊತೆ ಇರುವವರನ್ನು ನಗಿಸುವುದನ್ನು ವಾಡಿಕೆಯನ್ನಾಗಿಸಿರುವ ವಾಸಣ್ಣ, ಅಪರಿಚಿತರು ಸಿಕ್ಕಿದರೂ ಅವರ ಬಳಿ ಪರಿಚಿತರಂತೆ ಮಾತನಾಡಿ ತನ್ನ ಮುಗ್ಧ ಹಾಸ್ಯದ ಮೂಲಕ ಅವರನ್ನು ಕ್ಷಣ ಮಾತ್ರದಲ್ಲಿ ನಗಿಸಿ ಬಿಡುತ್ತಾರೆ. ಅದೇನೇ ಕಷ್ಟ ಬಂದರೂ, ನೋವಿದ್ದರೂ ನಗು ನಗುತ್ತಲೇ ಇರಬೇಕು, ಬೇರೆಯವರನ್ನೂ ನಗಿಸಬೇಕು ಅನ್ನುವುದು ವಾಸಣ್ಣನವರ ಮನದಾಳದ ಮಾತು.
ಸದ್ದಿಲ್ಲದೆ ತನ್ನ ಮುಗ್ಧ ಹಾಸ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ವಾಸು ಪೂಜಾರಿ ಮಲ್ಪೆ ಹುಟ್ಟು ಕಲಾವಿದನಲ್ಲ. ಕಲೆ, ರಂಗಭೂಮಿಯ ಮೇಲೆ ಎಳ್ಳಷ್ಟೂ ಜ್ಞಾನವೂ ಇವರಿಗಿಲ್ಲ. ನಟನೆಯನ್ನು ಕರಗತ ಮಾಡಿಕೊಂಡವರಲ್ಲ. ಆದರೆ ಇವರದು ನೈಜ ಪಾತ್ರ. ನಟನೆ, ನಾಟಕದ ಬಗ್ಗೆ ವಾಸಣ್ಣನ ಬಳಿ ಮಾತೆತ್ತಿದರೆ ಸಾಕು ನನ್ನ ಜೀವನವೇ ಒಂದು ನಾಟಕ ರಂಗ ಎಂದು ಹೇಳಿ ನಕ್ಕು ಸುಮ್ಮನಾಗಿಬಿಡುತ್ತಾರೆ.
ಇನ್ನು, ವಾಸಣ್ಣ ಕರಾವಳಿಯಲ್ಲಿ ಸಖತ್ ಫೇಮಸ್ ಆಗಿರೋದ್ರ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಕೆಲ ತಿಂಗಳುಗಳ ಹಿಂದೆ ವಾಸಣ್ಣ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿ ಕಾಲು ಕಳೆದುಕೊಳ್ಳುವ ದಯನೀಯ ಸ್ಥಿತಿಗೆ ತಲುಪಿದ್ದರು. ಈ ವೇಳೆ ವಾಸಣ್ಣನ ನೆರವಿಗೆ ನಿಂತಿದ್ದು ಮಲ್ಪೆಯ ಸ್ಥಳೀಯ ಜನರು. ಬಸ್ಸು ನಿಲ್ದಾಣದಲ್ಲಿ ದಿಕ್ಕಿಲ್ಲದೆ ಬಿದ್ದಿದ್ದ ವಾಸಣ್ಣನನ್ನು ಸ್ಥಳೀಯರು ಆಸ್ಪತ್ರೆ ಸೇರಿಸಿ ಅಪಾಯದಿಂದ ಪಾರು ಮಾಡಿದ್ದರು. ಅವರ ನೋವಿಗೆ ಸ್ಪಂದಿಸಿ ನೆರವಿಗೆ ನಿಂತರು. ಸ್ಥಳೀಯರ ನೆರವಿನಿಂದ ವಾಸಣ್ಣನಿಗೆ ಮತ್ತೆ ಲವಲವಿಕೆಯಿಂದ ಓಡಾಡಲು ಸಾಧ್ಯವಾಯಿತು. ಅಲ್ಲಿಂದ ಆರಂಭವಾಯಿತು ವಾಸಣ್ಣನ ಲಕ್ಕೀ ಜರ್ನಿ. ತನ್ನ ನೆರವಿಗೆ ನಿಂತ ಸ್ಥಳೀಯರಿಗೆ ತೀರಾ ಪರಿಚಿತರಾದ ವಾಸಣ್ಣ ಮುಗ್ಧ ಹಾಸ್ಯದಿಂದ ಎಲ್ಲರನ್ನು ನಗಿಸಲು ಆರಂಭಿಸಿದರು. ಆಶ್ಚರ್ಯವೆಂದರೆ, ಇವತ್ತು ವಾಸಣ್ಣನಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ ಎಂಬುವುದು ಅವರಿಗೇ ಗೊತ್ತಿಲ್ಲ.
ಮೊದ ಮೊದಲು ಬರೀ ಮಲ್ಪೆ ನಿವಾಸಿಗಳಿಗೆ ಮುಗ್ಧ ಹಾಸ್ಯದ ಮೂಲಕ ಪರಿಚಿತರಾಗಿದ್ದ ವಾಸಣ್ಣ ಕ್ಷಣ ಮಾತ್ರದಲ್ಲಿ ಕರಾವಳಿಯುದ್ದಕ್ಕೂ ಫೇಮಸ್ ಆಗಿಬಿಟ್ಟರು. ದಾನೆಂಬೆ ಮಾಲುವ, ಪುಲ್ಯ ಕಾಂಡೆ ಪಾಡುವ, ಇಂಚ ಪಾಡಿಯಂಡ ಇಲ್ಲ್ ಬಿತ್ತಲ್ ಮಾರುವ ಎಂಬ ತುಳು ಹಾಡಿಗೆ ಮೊದಲು ಸ್ಟೆಪ್ ಹಾಕಿದ ವಾಸಣ್ಣ ಇಡೀ ಕರಾವಳಿಗರ ಮನ ಗೆದ್ದರು. ಮಲ್ಪೆ ಬಂದರಿನಲ್ಲಿ ಮೀನು ಮಾರುವ ವಿಡಿಯೋ ಸೇರಿದಂತೆ ಕಿಟ್ಟ ಕಿಟ್ಟ ಕಿಟ್ಟ ಅಂಬಡೆ ಕಿಟ್ಟಾ ಹೀಗೆ ಅನೇಕ ಹಾಡುಗಳಿಗೆ ತನ್ನದೇ ಶೈಲಿಯಲ್ಲಿ ಹೆಜ್ಜೆ ಹಾಕಿ ಹೊಟ್ಟೆ ಹುಣ್ಣಾಗಿಸುವಂತೆ ಎಲ್ಲರನ್ನು ನಗುವಂತೆ ಮಾಡಿದರು. ಈ ಮೂಲಕ ಸದ್ದಿಲ್ಲದೆ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದರು.
ಈಗೀಗ ವಾಸಣ್ಣ ಅದೆಷ್ಟು ಫೇಮಸ್ ಅಂದ್ರೆ ಉಡುಪಿ, ಮಲ್ಪೆಗೆ ಬರುವ ಹೆಚ್ಚಿನ ಪ್ರವಾಸಿಗರು ವಾಸಣ್ಣನನ್ನು ನೋಡದೆ, ಅವರ ಜೊತೆ ಸೆಲ್ಫಿ ಕ್ಲಿಕ್ಕಿಸದೇ ಹೋಗೊದೇ ಇಲ್ಲ. ತನ್ನ ಬಳಿ ಬರುವ ಅಭಿಮಾನಿಗಳನ್ನು ವಾಸಣ್ಣ ನಗಿಸದೆ ಬರಿಗೈಯಲ್ಲಿ ಕಳಿಸೋದು ಇಲ್ಲ. ಹೆಣ್ಣು ಮಕ್ಕಳ ಮೇಲೆ ಅಪಾರವಾದ ಗೌರವವನ್ನು ಇಟ್ಟುಕೊಂಡಿರುವ ವಾಸಣ್ಣನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ತನ್ನ ಮುಗ್ಧ ಹಾಸ್ಯದಿಂದ ವಾಸಣ್ಣ ರಂಗಭೂಮಿಯ ಕಲಾವಿದರನ್ನು ಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದರೂ ತಪ್ಪಾಗಲಾರದು.
ವಿಶೇಷವೆಂದರೆ, ವಾಸಣ್ಣ ಮುಖಕ್ಕೆ ಬಣ್ಣ ಹಚ್ಚಿ ವೇದಿಕೆ ಹತ್ತದಿದ್ದರೂ ಕಾರವಳಿಯಲ್ಲಿ ಚಾರ್ಲಿ ಚಾಪ್ಲಿನ್ ಎಂದೇ ಚಿರಪರಿಚಿತರಾಗಿದ್ದಾರೆ. ಮಾತ್ರವಲ್ಲ, ತನ್ನ ಮುಗ್ಧತೆಯಿಂದಲೇ ಎಲ್ಲರ ಮನಸ್ಸಿಗೆ ಹತ್ತಿರವಾಗಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.
ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆದರೆ ಅದನ್ನು ಪ್ರದರ್ಶಿಸಲು ಕೆಲವರಿಗೆ ಅವಕಾಶ ಸಿಕ್ಕಿರುವುದಿಲ್ಲ. ಅದರಲ್ಲಿ ವಾಸಣ್ಣ ಕೂಡ ಒಬ್ಬರು. ಒಂದು ವೇಳೆ ವಾಸಣ್ಣನಿಗೆ ಉತ್ತಮ ವೇದಿಕೆ ಬಾಲ್ಯದಲ್ಲಿ ಸಿಕ್ಕಿರುತ್ತಿದ್ದರೆ, ಬಹುಷಃ ಇಂದು ಇವರು ದೊಡ್ಡ ಕಲಾವಿದರಾಗಿರುತ್ತಿದ್ದರು. ಅದೆನೇ ಇರಲಿ, ತನ್ನ ಮುಗ್ಧ ನಟನೆಯ ಮೂಲಕ ಕ್ಷಣ ಮಾತ್ರದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ವಾಸಣ್ಣನಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.