ನವದೆಹಲಿ, ಏ 04(SM): ಏಪ್ರಿಲ್ 05ರಂದು ಬಿಡುಗಡೆಯಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿರುವ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆ ಮುಹೂರ್ತಕ್ಕೆ ವಿಘ್ನ ಎದುರಾಗಿದೆ.
'ಪಿಎಂ ನರೇಂದ್ರಮೋದಿ’ ಸಿನಿಮಾ ಶುಕ್ರವಾರ ಬಿಡುಗಡೆಯಾಗುತ್ತಿಲ್ಲ. ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುವುದಾಗಿ ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಇದೇ ಕಾರಣದಿಂದ ಮೋದಿ ಸಿನಿಮಾ ರಿಲೀಸ್ ಆದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಬಹುತೇಕ ಹೆಚ್ಚಿದೆ ಎನ್ನುವ ಕಾರಣದಿಂದಾಗಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನಾಲ್ಕು ರಾಜ್ಯದಲ್ಲಿ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಪುರಸ್ಕರಿಸಿ ವಿಚಾರಣೆಗೆ ಸೂಚನೆ ನೀಡಿದೆ.
ಗುರುವಾರ ಪಿಐಎಲ್ ಅರ್ಜಿ ಸ್ವೀಕರಿಸಿದ ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ಮಾಡಲಿದ್ದು, ಬಳಿಕ ತನ್ನ ನಿರ್ಧಾರ ಪ್ರಕಟಿಸಲಿದೆ. ಅಲ್ಲಿಯ ತನಕ ಸಿನಿಮಾ ಬಿಡುಗಡೆಯಾಗದಂತೆ ಸೂಛನೆ ನೀಡಿದೆ. ಈ ಹಿನ್ನೆಲೆ ಶುಕ್ರವಾರ ರಿಲೀಸ್ ಆಗಬೇಕಿದ್ದ ಮೋದಿ ಬಯೋಪಿಕ್ ಸಿನಿಮಾ ತಾತ್ಕಾಲಿಕವಾಗಿ ಮುಂದೂಡಲಾಗಿದೆ.