ದುಬೈ,ಏ 04(MSP): ದೇಶದಲ್ಲಿಯೇ ಮೊದಲ ಬಾರಿಗೆ ಬೃಹತ್ ಬಜೆಟ್ ಸಿನಿಮಾ ಎಂದೇ ಹೆಸರಾಗಿದ್ದ ಮಹಾಭಾರತ ಸಿನಿಮಾ ಪ್ರಕ್ರಿಯೆ ಸ್ಥಗಿತಗೊಂಡಿದೆ. ನಿರ್ದೇಶಕರು ಮತ್ತು ಚಿತ್ರಕಥೆಗಾರರ ನಡುವಿನ ಸಂಘರ್ಷದಿಂದ ಈ ಸಿನಿಮಾ ನಿಲ್ಲಿಸಬೇಕಾಗಿ ಬಂತು ಎಂದು ಚಿತ್ರದ ನಿರ್ಮಾಪಕ ಹಾಗೂ ಭಾರತೀಯ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
2017ರಲ್ಲಿ ರಂಡಾಮೂಳಂ ಸಿನಿಮಾವನ್ನು ಸಾವಿರ ಕೋಟಿಯ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಬಿ.ಆರ್.ಶೆಟ್ಟಿ ಘೋಷಿಸಿದ್ದರು. ಪ್ರಸಿದ್ಧ ಜಾಹೀರಾತು ನಿರ್ದೇಶಕ ಶ್ರೀಕುಮಾರ್ ಮೆನನ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದರು. ರಂಡಾಮೂಳಂ ಸಿನಿಮಾ ಎಂ.ಟಿ.ವಾಸುದೇವ್ ನಾಯರ್ ಕೃತಿ ರಂಡಾಮೂಳಂ ಆಧಾರಿತವಾಗಿತ್ತು. ಮಹಾಭಾರತ ಮಹಾಕಾವ್ಯವನ್ನು ಭೀಮನ ದೃಷ್ಟಿಕೋನದಲ್ಲಿ ಹೇಳುವ ಪ್ರಯತ್ನವನ್ನು ಲೇಖಕ ನಾಯರ್ ಮಾಡಿದ್ದರು.
ಆದರೆ ಶ್ರೀಕುಮಾರ್ ಮೆನನ್ ಹಾಗೂ ನಾಯರ್ ಮದ್ಯೆ ಸಂಘರ್ಷ ಉಂಟಾಗಿದ್ದು, ಈ ಕಾರಣಕ್ಕೆ ಪ್ರಾಜೆಕ್ಟ್ ಕೈಬಿಡಲಾಗಿದೆ ಎಂದು ಬಿ.ಆರ್.ಶೆಟ್ಟಿ ಹೇಳಿದ್ದಾರೆ. ಭಾರತದ ಇತಿಹಾಸವನ್ನು ಪ್ರಪಂಚಕ್ಕೆ ತಿಳಿಸುವ ನಿಟ್ಟಿನಲ್ಲಿ ರಂಡಾಮೂಳಂ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದೆ ಆದರೆ ಸಾಧ್ಯವಾಗಿಲ್ಲ. ಆದರೆ ಉತ್ತಮ ಕಥೆ ಸಿಕ್ಕರೆ ಈಗಲೂ ಸಿನಿಮಾ ನಿರ್ಮಾಣಕ್ಕೆ ಸಿದ್ದನಾಗಿದ್ದೇನೆ ಇದಕ್ಕಾಗಿ ಹಣವನ್ನು ಮೀಸಲಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ರಂಡಾಮೂಳಂ ಸಿನಿಮಾಕ್ಕಾಗಿ, ನಟ ಮೋಹನ್ಲಾಲ್, ಮಹೇಶ್ ಬಾಬು ಸಹಿತ ಹಲವಾರು ಬಾಲಿವುಡ್ ನಟ ನಟಿಯರನ್ನು ಸಂಪರ್ಕಿಸಲಾಗಿತ್ತು.