ಮುಂಬೈ, ಜು 29 (DaijiworldNews/AK):ತೆಲುಗಿನ ನಟಿ ಊರ್ವಶಿ ರೌಟೇಲಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ನಟ ಪವನ್ ಕಲ್ಯಾಣ್ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಈ ಬರಹಕ್ಕೆ ಜನಕ್ರೋಶ ವ್ಯಕ್ತವಾಗುತ್ತಿದೆ.
ಆಂಧ್ರದ ಮುಖ್ಯಮಂತ್ರಿ ಪವನ್ ಕಲ್ಯಾಣ್ ಎಂದು ಉದ್ದೇಶಪೂರ್ವಕವಾಗಿಯೇ ಬರೆದಿರುವ ರೌಟೇಲಾರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ನಟನನ್ನು ಹೊಗಳುವುದಕ್ಕಾಗಿ ಮತ್ತು ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯನ್ನು ಅವಮಾನಿಸಿದ ನಟಿ ಊರ್ವಶಿ ರೌಟೇಲಾ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡುವಂತೆ ಹಲವಾರು ನೆಟ್ಟಿಗರು ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ.
ಊರ್ವಶಿ ರೌಟೇಲಾ ನಟನೆಯ ‘ಬ್ರೋ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಕೂಡ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಕಾರ್ಯಕ್ರಮವೊಂದರ ಫೋಟೋ ಹಂಚಿಕೊಂಡಿದ್ದ ಊರ್ವಶಿ, ‘ಗೌರವಾನ್ವಿತ ಮುಖ್ಯಮಂತ್ರಿಗಳಾದ ಪವನ್ ಕಲ್ಯಾಣ್ ಅವರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಈ ಬರಹ ಇದೀಗ ಚರ್ಚೆಗೆ ಕಾರಣವಾಗಿದೆ.