ಮುಂಬೈ, ಜು 10 (DaijiworldNews/AK) ಜುಲೈ 6ರಂದು ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಜನ್ಮದಿನ. ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಆದರೆ ಪತ್ನಿ ದೀಪಿಕಾ ಪಡುಕೋಣೆ ಅವರ ಕಡೆಯಿಂದ ಯಾವುದೇ ಶುಭಾಶಯ ಬಂದಿರಲಿಲ್ಲ. ಇದು ನೋಡುಗರ ಅನುಮಾನಕ್ಕೆ ಕಾರಣ ಆಯಿತು. ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ವಿಶ್ ಮಾಡಿಕೊಳ್ಳುತ್ತಿದ್ದ ಈ ದಂಪತಿ ಈಗ ಮೌನವಾಗಿದ್ದು ಏಕೆ ಎಂದು ಅನುಮಾನ ಹುಟ್ಟಿತ್ತು.. ಆದರೆ ಸ್ವಲ್ಪ ಸಮಯದಲ್ಲೇ ಎಲ್ಲರ ಅನುಮಾನಕ್ಕೆ ಉತ್ತರ ಸಿಕ್ಕಿದೆ.
ಪತಿ ರಣವೀರ್ ಸಿಂಗ್ ಜನ್ಮದಿನಕ್ಕೆ ಶುಭ ಕೋರಲು ದೀಪಿಕಾ ಪಡುಕೋಣೆ ಮರೆತಿದ್ದರು ಅನಿಸುತ್ತಿದೆ. ಅವರು ಒಂದು ದಿನ ತಡವಾಗಿ, ಅಂದರೆ ಜುಲೈ 7ರ ರಾತ್ರಿ ದೀಪಿಕಾ ಅವರು ಪತಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ಅಲ್ಲಿಗೆ ಎಲ್ಲರ ಅನುಮಾನಕ್ಕೆ ತೆರೆ ಬಿದ್ದಿದೆ. ಅದೂ ಸಾಲದೆಂಬಂತೆ ಈಗ ರಣವೀರ್ ಸಿಂಗ್ ಕೂಡ ಪತ್ನಿಗೆ ಧನ್ಯವಾದ ತಿಳಿಸುವ ಮೂಲಕ ಎಲ್ಲ ವದಂತಿಗಳಿಗೆ ಬ್ರೇಕ್ ಬಿದ್ದಿದೆ.
ದೀಪಿಕಾ ಪಡುಕೋಣೆ ಜೊತೆ ಖುಷಿಯಾಗಿ ಕಾಲ ಕಳೆದ ಫೋಟೋವನ್ನು ರಣವೀರ್ ಸಿಂಗ್ ಅವರು ಶೇರ್ ಮಾಡಿಕೊಂಡಿದ್ದಾರೆ. ‘ಹುಟ್ಟುಹಬ್ಬದ ಶುಭ ಕೋರಿದ್ದಕ್ಕೆ ಧನ್ಯವಾದಗಳು’ ಎಂಬ ಕ್ಯಾಪ್ಷನ್ನೊಂದಿಗೆ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ದಂಪತಿ ನಡುವೆ ಯಾವುದೇ ಕಿರಿಕ್ ಇಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.
ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಅನೇಕ ಗಾಸಿಪ್ಗಳು ಹಬ್ಬುತ್ತ ಇರುತ್ತವೆ. ಅದರಲ್ಲೂ ಲವ್, ಬ್ರೇಕಪ್, ಮದುವೆ, ವಿಚ್ಛೇದನದ ವಿಚಾರದಲ್ಲಿ ವದಂತಿಗಳಿಗೆ ಲೆಕ್ಕವೇ ಇಲ್ಲ. ಇತ್ತೀಚೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ದಾಂಪತ್ಯದ ಬಗ್ಗೆ ಗಾಸಿಪ್ ಹರಿದಾಡುತ್ತಿತ್ತು. ಈ ದಂಪತಿ ಮಧ್ಯೆ ಎಲ್ಲವೂ ಸರಿಯಿಲ್ಲ , ಆದಷ್ಟು ಬೇಗ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಡಿವೋರ್ಸ್ ಪಡೆಯಬಹುದು ಎಂದೆಲ್ಲ ವದಂತಿ ಹರಡಿಸಲಾಗಿತ್ತು. ಆದರೆ ಆ ವದಂತಿಯನ್ನು ರಣವೀರ್ ಸಿಂಗ್ ಅಲ್ಲ ಗಳೆದಿದ್ದಾರೆ. ಪತ್ನಿ ಜೊತೆಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.