ಮಂಗಳೂರು, ಮಾ29(SS): ಕೋಸ್ಟಲ್ವುಡ್ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಬಹು ನಿರೀಕ್ಷಿತ ಚಿತ್ರ ಕಟಪಾಡಿ ಕಟ್ಟಪ್ಪ ಇಂದು ತೆರೆಗೆ ಅಪ್ಪಳಿಸಿದೆ.
ಕಟಪಾಡಿ ಕಟ್ಟಪ್ಪ ಚಿತ್ರ ಕೆಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಒಂದೊಂದು ಕಥೆಗಳನ್ನು ಹೇಳುವ ರೀತಿಯಲ್ಲಿ ಚಿತ್ರವನ್ನು ರೆಡಿ ಮಾಡಲಾಗಿದೆ. ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಲೀಡ್ ರೋಲ್ನೊಂದಿಗೆ ಕೋಸ್ಟಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಬರ್ಕೆ ಯದ್ದು ಕೂಡ ಪ್ರಮುಖ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯಾವುದೇ ಭಾಷೆಗೆ ಡಬ್ ಇಲ್ಲದೆ ತುಳು ಚಿತ್ರವೊಂದು ತೆರೆ ಕಾಣುತ್ತಿರುವುದು ಇದೇ ಮೊದಲು. ನವಿರಾದ ಹಾಸ್ಯ ಈ ಚಿತ್ರದಲ್ಲಿದ್ದು, ಬಾಹುಬಲಿಯ ಕಟ್ಟಪ್ಪ ಮತ್ತು ಈ ಚಿತ್ರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ನಿರ್ಮಾಪಕ ರಾಜೇಶ್ ಬ್ರಹ್ಮಾವರ್ ಹೇಳಿದ್ದಾರೆ.
ಕಟಪಾಡಿ ಕಟ್ಟಪ್ಪವನ್ನು ಸ್ವತಃ ರಾಜೇಶ್ ನಿರ್ದೇಶಿಸಿದ್ದು, ಕರಾವಳಿಯ ಬೇರೆ ಬೇರೆ ಸುಂದರ ತಾಣಗಳಲ್ಲಿ ಸುಮಾರು 38ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಡಬ್ಬಿಂಗ್ ಕೆಲಸ ಮಂಗಳೂರಿನಲ್ಲಿಯೇ ನಡೆದಿದೆ.
ರಂಗಭೂಮಿಯ ಖ್ಯಾತ ನಟ, ನಿರ್ದೇಶಕ ಜೆಪಿ ತೂಮಿನಾಡು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಟಪಾಡಿ ಕಟ್ಟಪ್ಪ ಚಿತ್ರದ ಮೂಲಕ ಕರಿಷ್ಮಾ ಎಂಬ ಪ್ರತಿಭೆ ಕೋಸ್ಟಲ್ವುಡ್ಗೆ ಪರಿಚಯವಾಗಿದ್ದಾಳೆ. ಉಳಿದಂತೆ ಹಾಸ್ಯ ಕಲಾವಿದರಾದ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಸೂರಜ್ ಪಾಂಡೇಶ್ವರ್, ಧೀರಾಜ್ ನೀರುಮಾರ್ಗ ಸೇರಿದಂತೆ, ತುಳು ರಂಗಭೂಮಿ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸುಂದರ ದ್ರಶ್ಯಗಳನ್ನು ಹೊಂದಿದೆ. ಮುನಿ ಬೆಳೆಗೆರೆ ಕ್ಯಾಮೆರಾದಲ್ಲಿ ಕೆಲಸ ಮಾಡಿದರೆ, ಪ್ರಕಾಶ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಅನೇಕ ಸಾಹಸ ದೃಶ್ಯಗಳಿದ್ದು, ಇದನ್ನು ಕೌರವ ವೆಂಕಟೇಶ್ ನಿರ್ವಹಿಸಿದ್ದಾರೆ.