ಮಂಗಳೂರು,ಮಾ 27(MSP): ಇನ್ವೇಂಜರ್ ಟೆಕ್ನಾಲಜೀಸ್ ಬ್ಯಾನರಿನಲ್ಲಿ ಕೆ. ಸತ್ಯೇಂದ್ರ ಪೈ ಹಾಗೂ ಕೆ. ಕೃಷ್ಣ ಮೋಹನ್ ಪೈ ನಿರ್ಮಾಣದಲ್ಲಿ ತಯಾರಾದ ಗಂಧದಕುಡಿ ( ಹಿಂದಿಯಲ್ಲಿ ಚಂದನ್ವನ್) ಚಿತ್ರವು ಮಾರ್ಚ್ 29ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಭಾರತ ಮಾತ್ರವಲ್ಲದೆ ಅಮೆರಿಕಾದ ಸ್ಯಾನ್ ಡಿಯಾಗೋ, ಮೆಕ್ಸಿಕೊ, ಚಿಲಿ ಸೇರಿದಂತೆ 20ಕ್ಕೂ ಹೆಚ್ಚು ಅಂತಾರಾಷ್ಟ್ರ್ರೀಯ ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡ ಈ ಚಿತ್ರ ವಿಶ್ವ ಮಟ್ಟದ ಚಿತ್ರರಂಗದ ತಂತ್ರಜ್ಞ ರಿಂದ ಪ್ರಶಂಸೆಯನ್ನು ಗಳಿಸಿ ಜಗತ್ತಿನ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ಸಿನಿಮಾದ ನಿರ್ಮಾಪಕ ಸತ್ಯೇಂದ್ರ ಪೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪಶ್ಚಿಮ ಘಟ್ಟಗಳ ನಾಶದಿಂದ ಉಂಟಾಗುವ ಜಾಗತಿಕ ದುಷ್ಪರಿಣಾಮವನ್ನು ಎಳೆಎಳೆಯಾಗಿ ಬಿಚ್ಚಿಡುವ ಕಲಾತ್ಮಕ ಕಥಾವಸ್ತುವಿಗೆ ಕಮರ್ಷಿಯಲ್ ಟಚ್ ನೀಡಿರುವುದಲ್ಲದೇ ಈ ಚಿತ್ರವನ್ನು ತಾಂತ್ರಿಕವಾಗಿಯೂ ಶ್ರೀಮಂತಗೊಳಿಸಲಾಗಿದೆ. ಒಂದು ಗಂಭೀರ ವಿಷಯವನ್ನು ತಿಳಿ ಹಾಸ್ಯದ ಲೇಪನದೊಂದಿಗೆ ಮಕ್ಕಳ ಮೂಲಕ ಹೇಳ ಹೊರಟಿರುವ ನಿರ್ದೇಶಕರ ಪ್ರಯತ್ನ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಬಿಗಿಯಾದ ಚಿತ್ರಕಥೆ, ಸರಳ, ನಿರೂಪಣೆ, ಹಿರಿಯ ಹಾಗೂ ಕಿರಿಯ ಕಲಾವಿದರ ಮನೋಜ್ಞ ಅಭಿನಯ, ಚಿತ್ರಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರೀಕರಣಕ್ಕೆ ಆಯ್ಕೆ ಮಾಡಿದ ಮಲೆನಾಡಿನ ರಮಣೀಯ ತಾಣಗಳು ಮತ್ತು ನಯನ ಮನೋಹರ ದೃಶ್ಯ ವೈಭವದಿಂದ ಕೂಡಿದ ಗಂಧದ ಕುಡಿ ಚಿತ್ರವು ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಅವರು ತಿಳಿಸಿದರು.
ಈ ಸಿನಿಮಾವು ಬಿಡುಗಡೆಯ ಮೊದಲೇ ಜಾಗತಿಕ ಮಟ್ಟದಲ್ಲಿ ಸುದ್ದಿಮಾಡಿದೆ. ಸಿನಿಮಾ ಈಗಾಗಲೇ 21 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆಗೊಂಡಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಕೊಂಡಾಡುವ ನಾಡೆಂದರೆ ಕನ್ನಡ ನಾಡು ಎಂಬ ಹಾಡು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದಿದ್ದು, ಯುಟ್ಯೂಬ್ ಚಾನೆಲ್ಗಳಲ್ಲಿ ಜನಪ್ರಿಯಗೊಂಡಿದೆ.
ಸಂತೋಷ್ ಶೆಟ್ಟಿ ಕಟೀಲು ನಿರ್ದೇಶನದ, ಬಾಲಿವುಡ್ನ ಮಂಗಲ್ ಪಾಂಡೆ, ಜೋಧಾ ಅಕ್ಬರ್ ಮುಂತಾದ ಚಿತ್ರಗಳಲ್ಲಿ ಕಲಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವವಿರುವ ಸಂತೋಷ್ ಶೆಟ್ಟಿ ಕಟೀಲು ಸ್ವತಃ ಅನಿಮೇಷನ್ ತಂತ್ರಜ್ಞರು. ಈ ಮೊದಲು ಕನಸು ಕಣ್ಣು ತೆರೆದಾಗ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಆ ಚಿತ್ರಕ್ಕೂ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಇದೀಗ ಗಂಧದ ಕುಡಿ ವಿಭಿನ್ನ ಶೈಲಿಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಚಿತ್ರ ಬಿಡುಗಡೆಗೆ ಮುನ್ನವೇ ಅವರು ದುರಂತ ಸಾವಿಗೀಡಾಗಿದ್ದು ಖೇದಕರ ಸಂಗತಿ.
ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಮುಂಬಯಿ ನಿಧಿ ಸಂಜೀವ ಶೆಟ್ಟಿ ಭಾರತೀಯ ಮೂಲದ ಅಮೆರಿಕಾದ ಕೀಷಾ, ಆಶ್ಲಿನ್, ಪ್ರಣತಿ, ವಿಘ್ನೇಶ್, ಶ್ರೀಶಾ, ಶ್ರೇಯಸ್ ಮುಂತಾದ ಬಾಲ ಕಲಾವಿದರು ಲವಲವಿಕೆಯ ಅಭಿನಯದಿಂದ ಗಮನ ಸೆಳೆಯುತ್ತಾರೆ ಅಲ್ಲದೇ ಕನ್ನಡದ ಹೆಸರಾಂತ ಹಿರಿಯ ನಟ ರಮೇಶ್ ಭಟ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಶಿವಧ್ವಜ್ ಜ್ಯೋತಿ ರೈ, ಅರವಿಂದ ಶೆಟ್ಟಿ ಕೊಜಕೊಳ್ಳಿ, ದೀಪಕ್ ಶೆಟ್ಟಿ, ಯೋಗೀಶ್ ಕೋಟ್ಯಾನ್, ಜಿಪಿ ಭಟ್ ಮುಂತಾದವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಚಿನ್ ಶೆಟ್ಟಿ ಮತ್ತು ಲಕ್ಷ್ಮೀಷ್ ಶೆಟ್ಟಿ ( ಸ್ಟಡಿ ಕ್ಯಾಮ್) ಛಾಯಾಗ್ರಹಣ ರವಿರಾಜ್ ಗಾಣಿಗ ಸಂಕಲನ, ಪ್ರದೀಪ್ ರಾಯ್ ಕಲಾ ನಿರ್ದೇಶನ, ಪ್ರೀತಾ ಮಿನೇಜಸ್ ಸಹ ನಿರ್ದೇಶನ ಚಿತ್ರವನ್ನು ತಾಂತ್ರಿಕವಾಗಿ ಇಮ್ಮಡಿಗೊಳಿಸಿದೆ.
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ರಝಾಕ್ ಪುತ್ತೂರು ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದು, ಚಿತ್ರದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆ. ದಕ್ಷಿಣ ಭಾರತದ ಹೆಸರಾಂತ ಗಾಯಕ ವಿಜಯಪ್ರಕಾಶ್, ಶ್ರೇಯಾ ಜೈದೀಪ್, ಪ್ರಕಾಶ್ ಮಹದೇವ್, ರವಿ ಮಿಶ್ರಾ , ಸಾತ್ವಿ ಜೈನ್, ಲತೇಶ್ ಪೂಜಾರಿ ಮುಂತಾದವರ ಕಂಠಸಿರಿಯಿಂದ ಮೂಡಿ ಬಂದ ಹಾಡುಗಳು ಕೇಳುಗರನ್ನು ತನ್ಮಯಗೊಳಿಸುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಕೆ. ಕೃಷ್ಣ ಮೋಹನ್ ಪೈ, ಪ್ರಸಾದ್ ಕೆ. ಶೆಟ್ಟಿ, ನಿಧಿ ಶೆಟ್ಟಿ, ನರಸಿಂಹ ಮಲ್ಯ, ಅರವಿಂದ ಶೆಟ್ಟಿ, ರಜಾಕ್ ಪುತ್ತೂರು , ರವಿರಾಜ್ ಗಾಣಿಗ, ಚೇತನ್ ಉಪಸ್ಥಿತರಿದ್ದರು.