ಚೆನೈ,ಮಾ26(AZM):ಕೇರಳದ ಚೆಲುವೆ ನಯನತಾರ ಅವರ ಕುರಿತು, ಕೆಟ್ಟದ್ದಾಗಿ ಕಮೆಂಟ್ ಕೊಟ್ಟ ತಮಿಳು ನಟ ರಾಧಾ ರವಿಗೆ ನಟಿ ಸಮಂತಾ ಅಕ್ಕಿನೇನಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಸಂದೇಶ ಕಳಿಸಿದ ಸಮಂತಾ "ಮಿಸ್ಟರ್ ರವಿ... ಕಷ್ಟ ಎಂಬುದು ಎಂದಿಗೂ ಹಾಗೆಯೇ ಉಳಿಯುತ್ತದೆ. ನೀವು ತುಂಬಾ ನೋವನುಭವಿಸುತ್ತಿರುವ ವ್ಯಕ್ತಿ. ಹಾಗಾಗಿ ನಿಮ್ಮನ್ನು ನೊಡುತ್ತಿದ್ದರೆ ನಮಗೂ ನೋವಾಗುತ್ತದೆ. ನಿಮಗೆ ನೆಮ್ಮದಿ ಸಿಗಬೇಕೆಂದು ಬಯಸುತ್ತೇನೆ. ನಯನತಾರಾ ಅವರ ಮುಂದಿನ ಸೂಪರ್ ಹಿಟ್ ಸಿನಿಮಾ ಟಿಕೆಟ್ಗಳನ್ನು ನಿಮಗೆ ಕಳುಹಿಸುತ್ತೇವೆ. ಪಾಪ್ಕಾರ್ನ್ ತಿನ್ನುತ್ತಾ ಆಸ್ವಾದಿಸಿ" ಎಂದು ಹೇಳಿದ್ದಾರೆ.
ಅಭಿಮಾನಿಗಳು ಈ ಟ್ವೀಟ್ ನೋಡಿದ ತಕ್ಷಣವೇ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. "ಚೆನ್ನಾಗಿ ಹೇಳಿದ್ದೀರಿ ಸಮಂತಾ" ಎಂದು ನೆಟ್ಟಿಗರು ಅವರನ್ನು ಅಭಿನಂದಿಸುತ್ತಿದ್ದಾರೆ. ಮಹಿಳೆಯರ ಮೇಲೆ, ನಟಿಯರ ಮೇಲೆ ಅಸಭ್ಯಕರ ಕಾಮೆಂಟ್ ಮಾಡುವವರನ್ನು ಸಮಂತಾ ಆಗಾಗ ಸಾಮಾಜಿಕ ಮಾಧ್ಯಮಗಳ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ.
ನಯನತಾರ ಅವರಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ ಹಿನ್ನಲೆ ಈಗಾಗಲೇ ರಾಧಾರವಿಗೆ ನಡಿಗರ್ ಸಂಘ ನೋಟೀಸ್ ಜಾರಿ ಮಾಡಿದೆ. ಅವರನ್ನು ಇನ್ನು ಮುಂದೆ ಸಿನಿಮಾಗಳಿಗೆ ಆಯ್ಕೆ ಮಾಡಲ್ಲ ಎಂದು ನಿರ್ಮಾಣ ಸಂಸ್ಥೆಯೊಂದು ಘೋಷಿಸಿದೆ. ನಯನತಾರಾ ಸಹ ತನ್ನ ಅಭಿಪ್ರಾಯ ತಿಳಿಸಿ ಅವರಿಗೆ ಬುದ್ಧಿ ಕಲಿಸಿದ್ದಾರೆ.