ಬೆಂಗಳೂರು,ಮಾ.22(AZM):ಸಣ್ಣ ಪ್ರಾಯದಲ್ಲೇ ತನ್ನ ಅಪ್ಪ ಅಮ್ಮನ ಕೈ ತಪ್ಪಿ ಹೋದ ಒಂದು ಹುಡುಗನ ಕಥೆ ಮಿಸ್ಸಿಂಗ್ ಬಾಯ್. ತನ್ನ 7 ವರ್ಷದಲ್ಲಿ ಅಪ್ಪ ಅಮ್ಮನ ಕೈತಪ್ಪಿ ಹೋದ ಆ ಹುಡುಗ 35 ವರ್ಷದ ಬಳಿಕ ತನ್ನ ಅಪ್ಪ ಅಮ್ಮನನನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡುತ್ತಾನೆ. ಹೌದು, ನೈಜ್ಯ ಘಟನೆಯನ್ನು ಆಧರಿಸಿ ಚಿತ್ರೀಕರಿಸಿದ ಕನ್ನಡ ಚಿತ್ರ ಮಿಸ್ಸಿಂಗ್ ಬಾಯ್ 100ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಈ ವಾರ ಬಿಡುಗಡೆಗೊಳ್ಳಲಿದೆ.
ಡಿ.ಪಿ. ರಘುರಾಮ್ ನಿರ್ದೇಶನದ ಚಿತ್ರದಲ್ಲಿ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ನಟ ಗುರುನಂದನ್ ಮಿಸ್ಸಿಂಗ್ ಬಾಯ್ ಆಗಿದ್ದಾರೆ. ಅನಾದಿ ಕಾಲದಿಂದಲೂ ನಮ್ಮ ಸಮಾಜದಲ್ಲಿ ಪೊಲೀಸರು ಎಂದ ಕೂಡಲೇ ಅವರು ಲಂಚಕೋರರು, ಭ್ರಷ್ಟರು, ಹಿಂಸೆ ಕೊಡುವುದೇ ಅವರ ಕೆಲಸ ಎನ್ನುವಂಥ ಭಾವನೆ ಜನರಲ್ಲಿ ಬೆಳೆದುಕೊಂಡು ಬಂದಿದೆ. ಆದರೆ ಪೊಲೀಸರೆಂದರೆ ಎಲ್ಲರೂ ಕೆಟ್ಟವರೇ ಇರುವುದಿಲ್ಲ. ಅವರಲ್ಲೂ ಒಳ್ಳೆಯವರು ಇರುತ್ತಾರೆ, ಅವರಿಗೂ ಒಂದಷ್ಟು ಮಾನವೀಯ ಗುಣಗಳು ಇರುತ್ತವೆ ಎಂಬುದನ್ನು ಮಿಸ್ಸಿಂಗ್ ಬಾಯ್ ಎಂಬ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಆಗಿನ ಸಮಯದಲ್ಲಿ ಸಿಸಿಬಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಲವಕುಮಾರ್ ಅವರ ಹೆಗಲಿಗೆ ಒಂದು ಸೂಕ್ಷ್ಮ ಕೇಸು ಬಂದು ಬೀಳುತ್ತೆ. ಅವರು ಈ ಕೇಸನ್ನು ಯಾವ ರೀತಿ ತನಿಖೆ ನಡೆಸಿ, ಕೇಸನ್ನು ಕಂಡು ಹಿಡಿಯುವಲ್ಲಿ ಸಫಲರಾಗುತ್ತಾರೆ ಎನ್ನುವುದನ್ನು ಈ ಚಿತ್ರ ನಮಗೆ ತೋರಿಸುತ್ತದೆ.
ಬಹಳ ವರ್ಷಗಳ ನಂತರ ಸ್ವೀಡನ್ನಿಂದ ಭಾರತಕ್ಕೆ ಬಂದ ಸುಮಾರು 35 ವರ್ಷ ಪ್ರಾಯದ ಯುವಕನೊಬ್ಬ ತನ್ನ ಅಪ್ಪ-ಅಮ್ಮನನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರೊಂದನ್ನು ನೀಡುತ್ತಾನೆ. ಹಿಂದೆ ತಾನು ಏಳು ವರ್ಷದವನಿದ್ದಾಗ ಅಕಸ್ಮಾತ್ ಆಗಿ ತಪ್ಪಿಸಿಕೊಂಡಿದ್ದೆ ಎಂದಷ್ಟೇ ಪೊಲೀಸರಿಗೆ ಮಾಹಿತಿ ನೀಡಿರುತ್ತಾನೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ರಂಗಾಯಣ ರಘು ನಟಿಸುತ್ತಿದ್ದಾರೆ. ನಾಯಕ ಗುರುನಂದನ್ ಜೋಡಿಯಾಗಿ ಕೇರಳ ಮೂಲದ ಅರ್ಚನಾ ಜಯಕೃಷ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇಪ್ಪತ್ತೇಳು ವರ್ಷಗಳ ಹಿಂದೆ ನಡೆದಂಥ ಆ ಘಟನೆಯನ್ನು ಸಿಸಿಬಿ ಅಧಿಕಾರಿಯು ಯಾವ ರೀತಿಯಲ್ಲಿ ಶೋಧನೆ ಮಾಡುತ್ತಾರೆ, ಹೇಗೆಲ್ಲ ಬುದ್ಧಿವಂತಿಕೆ ಉಪಯೋಗಿಸಿ ಅದನ್ನು ಪತ್ತೆ ಹಚ್ಚುತ್ತಾರೆ ಎನ್ನುವಂಥ ಕುತೂಹಲಕರ ಕಥಾನಕವನ್ನು ಥ್ರಿಲ್ಲರ್ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಡಿ.ಪಿ. ರಘುರಾಮ್ ಮಾಡಿದ್ದು,ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಭಾರೀ ಸದ್ದು ಮಾಡಿದೆ. .