ಬೆಂಗಳೂರು, ಮಾ 22 (DaijiworldNews/DB): ದೇಶಾದ್ಯಂತ ಯುಗಾದಿ ಸಂಭ್ರಮ ರಂಗೇರಿದೆ. ಭಾರತೀಯ ಹೊಸ ವರ್ಷವನ್ನು ಜನ ಸಡಗರದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾ ಮಂದಿಯಂತೂ ಯುಗಾದಿ ಆಚರಣೆಯನ್ನು ಜೋರಾಗೇ ಮಾಡಿಕೊಂಡಿದ್ದಾರೆ. ಹಬ್ಬ ಸಂಭ್ರಮಿಸುವುದರೊಂದಿಗೆ ಸಾಂಪ್ರದಾಯಿಕ ಧಿರಿಸಿನಲ್ಲಿ ತಯಾರಾಗಿ ಫೋಟೋಶೂಟ್ ಮಾಡಿಸಿಕೊಂಡು ಖುಷಿ ಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಮದುವೆಯಾದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಜೋಡಿಗಿದು ಮದುವೆಯ ಬಳಿಕ ಮೊದಲ ಯುಗಾದಿ. ಹೀಗಾಗಿ ಈ ನವ ಜೋಡಿ ಯುಗಾದಿಯನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸಾಂಪ್ರದಾಯಿ ಧಿರಿಸಿನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಸಿಂಹಪ್ರಿಯಾ ಜೋಡಿ ಯುಗಾದಿಯಂದು ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಹರಿಪ್ರಿಯಾ ಕೆಂಪು ಬಣ್ಣದ ಜರಿ ಸೀರೆಯಲ್ಲಿ ಮಿಂಚಿದರೆ, ವಸಿಷ್ಠ ಸಿಂಹ ಕಪ್ಪು, ಕಂದ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣದ ಮುಖಾಂತರ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದು, ಸಿಂಹಪ್ರಿಯಾ ಅಭಿಮಾನಿಗಳೂ ತಮ್ಮ ನೆಚ್ಚಿನ ಜೋಡಿಯ ಯುಗಾದಿ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದಾರೆ.
ಕಳೆದ ಜನವರಿ 26ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿಂಹಪ್ರಿಯಾ ಜೋಡಿಗೆ ಮದುವೆಯಾಗಿ ಎರಡು ತಿಂಗಳಾಗುತ್ತಾ ಬರುತ್ತಿದೆ. ಈ ನಡುವೆ ಹರಿಪ್ರಿಯಾ ಹೊಸದಾಗಿ ಯೂಟ್ಯೂಬ್ ಚಾನೆಲ್ವೊಂದನ್ನು ಆರಂಭಿಸುವುದಾಗಿ ನಿನ್ನೆಯಷ್ಟೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.