ಮುಂಬೈ, ಫೆ 18 (DaijiworldNews/DB): ಬಾಲ ನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದವರ ಪೈಕಿ ಸಣ್ಣ ಅವಧಿಯಲ್ಲೇ ನಾಯಕಿಯಾಗಿ ಜನಪ್ರಿಯತೆ ಪಡೆದವರು ಹನ್ಸಿಕಾ ಮೊಟ್ಟಾನಿ. ತೆಲುಗಿನ ದೇಶಮುದುರು ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡ ಹನ್ಸಿಕಾ ಅವರಿಗೆ ಅದೃಷ್ಟದ ಬಾಗಿಲು ಹುಡುಕಿಕೊಂಡು ಬಂದಿತ್ತು. ಆದರೆ ಹನ್ಸಿಕಾ ಇಷ್ಟು ಬೇಗ ಅದೃಷ್ಟದ ಪರೀಕ್ಷೆಯಲ್ಲಿ ವಿಜಯಿಯಾಗಲು ಅವರ ತಾಯಿ ನೀಡಿದ ಹಾರ್ಮೋನ್ ಇಂಜೆಕ್ಷನ್ ಕಾರಣ ಎಂದು ದಶಕದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು.
ಇದೀಗ ಅಂತೆಕಂತೆಗಳ ಸುದ್ದಿ ಹರಡಿದ ಹಲವು ವರ್ಷಗಳ ಬಳಿಕ ಈ ಅಂತೆ ಕಂತೆ ಸುದ್ದಿಯ ಬಗ್ಗೆ ತಾಯಿ ಮಗಳಿಬ್ಬರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬಳುಕುವ ದೇಹದಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹನ್ಸಿಕಾ ಅವರು ಬೇಗನೇ ಪ್ರಸಿದ್ದಿಯಾಗಲು ಅವರ ತಾಯಿ ಡಾ. ಮೋನಾ ಮೊಟ್ಟಾನಿ ಅವರು ನೀಡಿದ ಹಾರ್ಮೋನ್ ಇಂಜೆಕ್ಷನ್ ಕಾರಣವಾಯಿತು. ಸೌಂದರ್ಯ ಹೆಚ್ಚಿಸಿಕೊಂಡು ಚಿತ್ರರಂದಲ್ಲಿ ಬೇಗ ಪ್ರಸಿದ್ದಿ ಪಡೆಯಲು ಈ ಇಂಜೆಕ್ಷನ್ ನೀಡಲಾಗಿತ್ತು ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.
ಇದೀಗ ಸಂದರ್ಶನವೊಂದರಲ್ಲಿ ಈ ಸುದ್ದಿ ಬಗ್ಗೆ ಅಸಮಾಧಾನ ತೋಡಿಕೊಂಡಿರುವ ಹನ್ಸಿಕಾ ಮತ್ತವರ ತಾಯಿ ಮೋನಾ, ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದವರ ವಿರುದ್ದ ಕಿಡಿ ಕಾರಿದ್ದಾರೆ. ಜನ ಕೆಟ್ಟದಾಗಿ ಬರೆದು ಏನೇನೋ ಗುಲ್ಲೆಬ್ಬಿಸಿದರು. ಆದರೆ ಒಬ್ಬರು ಹೇಳಿದ್ದನ್ನು ನಿಜವೆಂದೇ ಎಲ್ಲರೂ ಅಂದುಕೊಂಡು ವೈರಲ್ ಮಾಡಿದರು. ಇದು ತುಂಬಾ ನೋವು ನೀಡಿದೆ ಎಂದು ಹನ್ಸಿಕಾ ಹೇಳಿಕೊಂಡಿದ್ದಾರೆ.
ಇನ್ನು ಆಕೆಯ ತಾಯಿ ಮಾತನಾಡಿ, ಒಂದು ವೇಳೆ ಹಾರ್ಮೋನ್ ಇಂಜೆಕ್ಷನ್ ನೀಡಿ ಸೌಂದರ್ಯ ಹೆಚ್ಚಿಸುವುದು ಸಾಧ್ಯವೇ ಆಗಿದ್ದರೆ ನನ್ನ ಬಳಿ ಜನ ಕ್ಯೂ ನಿಂತಿರುತ್ತಿದ್ದರು. ನಾನೀಗ ಟಾಟಾ ಬಿರ್ಲಾಗಿಂತ ಶ್ರೀಮಂತೆಯಾಗಿರುತ್ತಿದ್ದೆ. ಕಾಮನ್ಸೆನ್ಸ್ ಇದ್ದವರ್ಯಾರೂ ಈ ರೀತಿಯ ಸುದ್ದಿಗಳನ್ನು ಹಬ್ಬಿಸುವುದಿಲ್ಲ ಎಂದು ಬೇಸರಿಸಿದ್ದಾರೆ. ಪಂಜಾಬಿಗಳಲ್ಲಿ ಹೆಣ್ಣು ಮಕ್ಕಳು 12ರಿಂದ 16 ವರ್ಷಕ್ಕೆ ದೊಡ್ಡವರಾಗುತ್ತಾರೆ ಎಂದಿದ್ದಾರೆ.