ಮಂಗಳೂರು, ಜ 30 (DaijiworldNews/HR): ಕರಾವಳಿಯ ನಟಿ ಶೋಭಿತಾ ಅಭಿನಯದ 'ಕೆಂಡದ ಸೆರಗು' ಕನ್ನಡ ಚಲನಚಿತ್ರದ ಟೀಸರ್ ಜನವರಿ 23 ರಂದು ಬಿಡುಗಡೆಯಾಗಿದ್ದು, ಕೆಂಡದ ಸೆರಗು ಪ್ರಶಸ್ತಿ ವಿಜೇತ ಕಾದಂಬರಿಯನ್ನು ಆಧರಿಸಿ ಈ ಸಿನಿಮಾವನ್ನು ರಾಕಿ ಸೋಮ್ಲಿ ಬರೆದು ನಿರ್ದೇಶಿಸಿದ್ದಾರೆ.
ಶೋಭಿತಾ ಮಂಗಳೂರಿನ ವಾರಿಜಾ ಮತ್ತು ಉಮೇಶ್ ಪೂಜಾರಿ ದಂಪತಿಯ ಪುತ್ರಿಯಾಗಿದ್ದು, ಶೋಭಿತಾ ಕೆಂಡದ ಸೆರಗು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಶೋಭಿತಾ ಯಕ್ಷಗಾನ ಕಲಾವಿದೆ ಕೂಡ ಆಗಿದ್ದು, ಪಿಎಸ್ಐ ಆಗಲು ಬೆಂಗಳೂರಿಗೆ ಬಂದಿದ್ದ ಆಕೆ ತರಬೇತಿ ಪಡೆಯುತ್ತಿದ್ದಳು. ಅದೇ ಸಮಯದಲ್ಲಿ ಶೋಭಿತಾ ಆಡಿಷನ್ಗೆ ಹಾಜರಾಗಿ ಚಲನಚಿತ್ರದಲ್ಲಿ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕೆಂಡದ ಸೆರಗು ಚಿತ್ರವನ್ನು ರಾಕಿ ಸೋಮ್ಲಿ ನಿರ್ದೇಶಿಸಿದ್ದು, ಶ್ರೀ ಮಟ್ಟು ಟಾಕೀಸ್ ಮತ್ತು ಎಸ್ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾದ ಕೆಂಡದ ಸೆರಗು, ಭೂಮಿ ಶೆಟ್ಟಿ ಕುಸ್ತಿಪಟುವಾಗಿಯೂ ನಟಿಸಿದ್ದಾರೆ. ಸಿಂಧು ಲೋಕನಾಥ್ ಅವರು ಲೇಖಕಿಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಚಿತ್ರದಲ್ಲಿ ಯಶ್ ಶೆಟ್ಟಿ, ವರದನ್, ಶೋಭಿತಾ, ಪ್ರತಿಮಾ, ಬಸು ಹಿರೇಮಠ್ ಮತ್ತು ಹರೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾದ ಕುರಿತು ಮಾತನಾಡಿದ ಶೋಭಿತಾ, ನಾನು ಚಿತ್ರದಲ್ಲಿ ಸಂಪೂರ್ಣ ವಿಭಿನ್ನವಾದ ಪಾತ್ರವನ್ನು ನಿರ್ವಹಿಸುತ್ತಿದ್ದು, ಅದು ಸವಾಲಿನ ಪಾತ್ರವಾಗಿತ್ತು. ಆರಂಭದಲ್ಲಿ ತುಂಬಾ ಕ್ಯಾಶುಯಲ್ ಆಗಿ ಪಾತ್ರ ಮಾಡಿದ್ದೆ. ದಿನಗಳು ಮುಂದುವರೆದಂತೆ, ಪಾತ್ರದ ಆಳವನ್ನು ಅನುಭವಿಸಿದೆ. ವಯಸ್ಸಿಗೆ ಮೀರಿದ ಪಾತ್ರ ಅಂತ ನನಗೂ ಅನ್ನಿಸಿತು. ಕೆಂಡದ ಸೇರಗು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಬಡ ಹಿನ್ನೆಲೆಯ ಮಹಿಳೆ ಎದುರಿಸುತ್ತಿರುವ ದೌರ್ಜನ್ಯವನ್ನು ತೋರಿಸುತ್ತದೆ ಎಂದಿದ್ದಾರೆ.
ಕೆಂಡದ ಸೇರಗು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇನ್ನು ಶೋಭಿತಾ ಅವರು ಫೆಬ್ರವರಿ 25 ರಿಂದ ಶೂಟಿಂಗ್ ಆರಂಭವಾಗಲಿರುವ 'ಪರಿಶೋಧನ' ಚಿತ್ರದ ಮೂಲಕ ತೆಲುಗಿಗೂ ಪಾದಾರ್ಪಣೆ ಮಾಡಲಿದ್ದಾರೆ.