ಬೆಂಗಳೂರು, ಜ 13 (DaijiworldNews/DB): ’ಕಾಂತಾರ’ ಸಿನಿಮಾ ನಟಿ ಸಪ್ತಮಿ ಗೌಡ ಅವರಿಗೆ ಇದೀಗ ಡಿಮ್ಯಾಂಡ್ ಹೆಚ್ಚಾಗಿದೆ. ಸ್ಯಾಂಡಲ್ವುಡ್ನಿಂದ ನೇರವಾಗಿ ಬಾಲಿವುಡ್ ಅಂಗಳಕ್ಕೆ ಈ ನಟಿ ದಾಪುಗಾಲಿಡಲಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ಚಿತ್ರದಲ್ಲಿ ನಟಿಸಲು ಸಪ್ತಮಿ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದ್ದು, ಸಪ್ತಮಿ ಗೌಡ ಅವರು ಹೈದರಾಬಾದ್ನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಚಿತ್ರವು ಕೊರೊನಾ ವ್ಯಾಕ್ಸಿನ್ ವಿಚಾರವಾಗಿ ಇದ್ದು, ಕೋವಿಡ್ ಸಂದರ್ಭದಲ್ಲಿನ ನೈಜ ಘಟನೆಯಾಧಾರಿತವಾದ ಚಿತ್ರವಾಗಿದೆ. ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ ಮುಂತಾದ ಖ್ಯಾತನಾಮರೊಂದಿಗೆ ಸಪ್ತಮಿ ತೆರೆ ಹಂಚಿಕೊಳ್ಳಲಿದ್ದಾರೆ. ಆದರೆ ಸಪ್ತಮಿ ಪಾತ್ರ ಈ ಚಿತ್ರದಲ್ಲಿ ಹೇಗಿರಲಿದೆ ಎಂಬುದು ಕಾದು ನೋಡಬೇಕಿದೆ. ಇನ್ನು ಈ ಚಿತ್ರ ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.
ಡಾಲಿ ಧನಂಜಯ್ ಜೊತೆ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಸಪ್ತಮಿ, ಕಾಂತಾರದ ಲೀಲಾ ಆಗಿ ನಟಿಸಿ ಜನಪ್ರಿಯತೆ ಗಳಿಸಿದ್ದರು. ತಮ್ಮ ಮುಗ್ದ ಪಾತ್ರದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಕಾಂತಾರದ ಬಳಿಕ ಸಪ್ತಮಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದಿದ್ದು, ಇಷ್ಟವಾದ ಪ್ರಾಜೆಕ್ಟ್ಗಳಿಗೆ ಸಹಿ ಮಾಡುತ್ತಿದ್ದಾರೆ.