ಬೆಂಗಳೂರು, ಡಿ 12 (DaijiworldNews/HR): ನಟಿ ರಮ್ಯಾ ಅವರ ನಿರ್ಮಾಣದಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಮೂಡಿಬರುತ್ತಿದ್ದು, ಇದೀಗ 'ಸ್ವಾತಿ ಮುತ್ತಿನ ಮಳೆ ಹನಿಯೇ' ಶೀರ್ಷಿಕೆಯನ್ನು ಬಳಸಬಾರದು ಎಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ಆಕ್ಷೇಪ ಎತ್ತಿದ್ದಾರೆ.
ಈ ಕುರಿತು ರಾಜೇಂದ್ರ ಸಿಂಗ್ ಬಾಬು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ಈ ಶೀರ್ಷಿಕೆಯನ್ನು ತಾವು ನೋಂದಾಯಿಸಿದ್ದು, ಬೇರೆ ಯಾರಿಗೂ ಇದನ್ನು ಬಳಸಲು ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.
ಇನ್ನು 1990ರಲ್ಲಿ 'ಬಣ್ಣದ ಗೆಜ್ಜೆ' ಚಿತ್ರ ಬಿಡುಗಡೆ ಆಗಿದ್ದು, ಆ ಸಿನಿಮಾಗೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಹಾಡು ಇದ್ದು, ಇದೇ ಶೀರ್ಷಿಕೆಯನ್ನು ಇಟ್ಟುಕೊಂಡು ನಟಿ ರಮ್ಯಾ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ರಾಜೇಂದ್ರ ಸಿಂಗ್ ಬಾಬು ಅವರು ಈ ಶೀರ್ಷಿಕೆಯನ್ನು ತಾವು ನೋಂದಾಯಿಸಿರುವುದಾಗಿ ತಿಳಿಸಿದ್ದಾರೆ.
ಒಂದೇ ಶೀರ್ಷಿಕೆಯಲ್ಲಿ ಎರಡು ಸಿನಿಮಾ ನಿರ್ಮಾಣ ಆಗುತ್ತಿರುವುದು ಅಚ್ಚರಿ ಮೂಡಿಸಿದ್ದು, ರಮ್ಯಾ ಅವರು ತಮ್ಮ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.