ಬೆಂಗಳೂರು, ಡಿ 03(DaijiworldNews//DB): ನಟ ವಸಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯಾ ಹಸೆಮಣೆ ಏರುತ್ತಾರೆಂಬ ವದಂತಿಗಳಿಗೆ ಇದೀಗ ಈ ಸ್ಟಾರ್ ಜೋಡಿ ಅಧಿಕೃತ ಮುದ್ರೆ ಒತ್ತಿದ್ದಾರೆ. ಒಂದೇ ಚಿತ್ರವನ್ನು ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕ್ಯೂಟ್ ತಲೆಬರಹ ನೀಡಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.
ಹೌದು ಕಳೆದ ಹಲವು ಸಮಯಗಳಿಂದ ಇವರಿಬ್ಬರ ಬಗ್ಗೆ ಗುಸು ಗುಸು ಹಬ್ಬಿತ್ತು. ಕೆಲ ದಿನಗಳ ಹಿಂದಷ್ಟೇ ಈ ಸ್ಟಾರ್ ಜೋಡಿ ವಿಮಾನ ನಿಲ್ದಾಣವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ಬಂದಂತಾಗಿತ್ತು. ಇದೀಗ ಇಬ್ಬರೂ ಪ್ರೀತಿಯಲ್ಲಿರುವ ಬಗ್ಗೆ ಮತ್ತು ಮದುವೆಯಾಗುತ್ತಿರುವ ಬಗ್ಗೆ ಮಹತ್ವದ ಕ್ಲೂ ನೀಡಿದ್ದಾರೆ.
ಶುಕ್ರವಾರವಷ್ಟೇ ಸಿಂಹದ ಕೈಯಲ್ಲಿ ಮಗುವೊಂದಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದ ನಟಿ ಹರಿಪ್ರಿಯ 'ಚಿನ್ನ ನಿನ್ನ ತೋಳಿನಲಿ ಕಂದ ನಾನು’ ಎಂದು ಶೀರ್ಷಿಕೆ ನೀಡಿದ್ದರು. ಇಂದು ಅದೇ ಚಿತ್ರವನ್ನು ಟ್ವೀಟ್ ಮಾಡಿರುವ ನಟ ವಸಿಷ್ಟ ಸಿಂಹ, ’ಎಂದೂ ನಿನ್ನ ನೆರಳಾಗಿ ಕಾಯುವೆ ನಾನು’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಇಬ್ಬರೂ ತಮ್ಮ ಪ್ರೀತಿ, ವಿವಾಹದ ಸುದ್ದಿಗಳು ನಿಜ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಈ ನಡುವೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಎಂಗೇಜ್ಮೆಂಟ್ ಕೂಡಾ ಮಾಡಿಕೊಂಡಿದ್ದಾರೆ. ಸರಳವಾಗಿ ಕುಟುಂಬಿಕರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ನಡೆದಿದೆ. ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಅವರು ಹಸೆಮಣೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.