ಕೊಚ್ಚಿ, ನ 09 (DaijiworldNews/MS): ಆದಾ ಶರ್ಮ ನಟನೆಯ ಹಿಂದಿಯ ‘ದಿ ಕೇರಳ ಸ್ಟೋರಿ’ ಸಿನಿಮಾ ಕೂಡ ವಿವಾದದ ಕಿಡಿ ಹೊತ್ತಿಸಿದೆ. ಈ ಸಿನಿಮಾದ ಟೀಸರ್ ನಲ್ಲಿ ಕೇರಳದಲ್ಲಿ 32 ಸಾವಿರ ಹುಡುಗಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಹಾಗೂ ಅವರನ್ನು ವಿದೇಶಕ್ಕೆ ಕಳಿಸಿ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಡೈಲಾಗ್ ವಿವಾದ ಹುಟ್ಟುಹಾಕಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೇರಳ ಪೊಲೀಸ್ ಮಹಾ ನಿರ್ದೇಶಕ ಅನಿಲ್ ಕಾಂತ್ ಆದೇಶಿಸಿದ್ದಾರೆ.
![](https://daijiworld.ap-south-1.linodeobjects.com/Linode/img_tv247/ms-091122-kerala.jpg)
ಅಮೃತ ಲಾಲ್ ಶಾ ನಿರ್ಮಾಣದ "ದಿ ಕೇರಳ ಸ್ಟೋರಿ" ಟೀಸರ್ ಸಖತ್ ವೈರಲ್ ಆಗಿದ್ದು ಇದರಲ್ಲಿ ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ ಈ ಟೀಸರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಗುರುವಾರವಷ್ಟೇ ಈ ಸಿನಿಮಾದ 1.5 ನಿಮಿಷಗಳ ಟೀಸರ್ ಬಿಡುಗಡೆಯಾಗಿದ್ದು, 32 ಸಾವಿರ ಮಹಿಳೆಯರ ನಾಪತ್ತೆಯ ಸುತ್ತವೇ ಹೆಣೆದ ಕಥೆ ಇದಾಗಿದೆ. ಉಗ್ರರಿಗೆ ಮಾರಾಟಗೊಂಡ ಶೀತಲ್ ಉನ್ನಿಕೃಷ್ಣನ್ (ನಟಿ)ಎಂಬ ಮಹಿಳೆಯ ಪ್ರಬಲ ಮಾತುಗಳನ್ನು ಟೀಸರ್ನಲ್ಲಿ ವೀಕ್ಷಿಸಬಹುದು. ಕಳೆದ 10 ವರ್ಷಗಳಲ್ಲಿ ಕೇರಳದಿಂದ ಕಳ್ಳಸಾಗಣೆಯಾಗಿ, ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರಗೊಂಡು, ಅಫ್ಘಾನಿಸ್ತಾನ, ಸಿರಿಯಾ, ಯೆಮೆನ್ನಂಥ ನರಕದಲ್ಲಿ ದಿನ ದೂಡುತ್ತಿರುವ ಹೆಣ್ಣುಮಕ್ಕಳ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.