ಬೆಂಗಳೂರು, ಫೆ 20(MSP): ಫೆ. 22 ರಂದು ಬಿಡುಗಡೆಯಾಗಬೇಕಾಗಿರುವ ನೀನಾಸಂ ಸತೀಶ್ ಅಭಿನಯದ ’ಚಂಬಲ್ ’ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ. ಯಾಕೆಂದರೆ ಚಿತ್ರ ಬಿಡುಗಡೆ ಮಾಡದಂತೆ ತಡೆ ಕೋರಿ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ ರವಿ ಅವರ ತಾಯಿ ಗೌರಮ್ಮ ಹಾಗೂ ತಂದೆ ಕರಿಯಪ್ಪರಿಂದ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಚಿತ್ರದ ಕಥೆಯು ಡಿ.ಕೆ ರವಿ ಜೀವನವನ್ನು ಹೋಲುತ್ತದೆ.ಅಲ್ಲದೆ ಸಿನಿಮಾದಲ್ಲಿ ಚಾರಿತ್ರ್ಯಹರಣ ಮಾಡುವಂತಹ ಅಂಶಗಳಿವೆ. ಆದ್ದರಿಂದ ಚಿತ್ರ ಬಿಡುಗಡೆಗೆ ತಡೆ ಕೋರಿ ಹಾಗೂ ಚಿತ್ರಕ್ಕೆ ನೀಡಿದ್ದ ಸೆನ್ಸಾರ್ ಹಿಂಪಡೆಯಬೇಕು ಎಂದು ಮನವಿ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ, ಕೇಂದ್ರ ಸಾರ್ವಜನಿಕ ಮತ್ತು ಮಾಹಿತಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಸೆನ್ಸಾರ್ ಮಂಡಳಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರತಂಡಕ್ಕೆ ನೋಟಿಸ್ ಜಾರಿ ವಿಚಾರಣೆಯನ್ನು ಫೆ. 21ಕ್ಕೆ ಮುಂದೂಡಿದೆ.
ಚಂಬಲ್ ಚಿತ್ರದ ಟ್ರೈಲರ್ ಜನವರಿ 31ರಂದು ಯೂಟ್ಯೂಬ್ನಲ್ಲಿ ರಿಲೀಸ್ ಆಗಿ ಚಿತ್ರ ಪ್ರೇಮಿಗಳಿಂದ ಉತ್ತಮ ರೆಸ್ಪಾನ್ಸ್ ಪಡೆದಿತ್ತು. ಚಿತ್ರದಲ್ಲಿ ಸತೀಶ್ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಧಿಕಾರಿ ಡಿ. ಕೆ ರವಿಯವರ ಕಥೆ ಹೋಲುತ್ತಿದೆ ಎಂಬ ಮಾತುಗಳು ಕೇಳಿಬಂದಿತ್ತು. ಹೀಗಾಗಿ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದ್ದಾರೆ.