ಮಂಗಳೂರು, ಫೆ 18 (MSP): ಒಂದು ಉತ್ತಮ ಚಿತ್ರ ಕೋಸ್ಟಲ್ ವುಡ್ ಗೆ ನೀಡಿದ್ರೆ, ತುಳುಚಿತ್ರಪ್ರೇಮಿಗಳು ಅದನ್ನು ಒಪ್ಪಿಕೊಂಡು ಯಶಸ್ವಿಯಾಗಿಸುತ್ತಾರೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾದ ’ದಗಲ್ ಬಾಜಿಲು’ ಸಿನಿಮಾ. ಹೌದು 2018 ರಲ್ಲಿ ಕೋಸ್ಟಲ್ ವುಡ್ ನಲ್ಲಿ ಹಿಟ್ ಆದ ಬೆರಳೆಣಿಕೆಯ ಚಿತ್ರದಲ್ಲಿ ದಗಲ್ ಬಾಜಿಲು ಸಿನಿಮಾ ಕೂಡಾ ಒಂದು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ , ಸಾಹಿತ್ಯ, ಸಂಭಾಷಣೆಯ ಜತೆಗೆ ನಟನೆ ಮಾಡಿರುವ ಬಾಂಬೆ ಬಾಚು ಖ್ಯಾತಿಯ ಸುರೇಶ್ ಅಂಚನ್ ಹೊಸ ಚಿತ್ರದೊಂದಿಗೆ ಮತ್ತೆ ಕೋಸ್ಟಲ್ ವುಡ್ ನಲ್ಲಿ ಕಮಾಲ್ ಮಾಡಲಿದ್ದಾರೆ.
ಈ ಬಾರಿ ಕಥೆ, ಚಿತ್ರಕಥೆ , ಸಾಹಿತ್ಯ, ಸಂಭಾಷಣೆ, ಜತೆಗೆ ನಿರ್ದೇಶನದ ಜವಬ್ದಾರಿಯನ್ನು ಹೆಗಲಿಗೇರಿಸಿಕೊಂಡು, ಹಾಸ್ಯಚಿತ್ರವೊಂದನ್ನು ಮಾಡಹೊರಟಿದ್ದು ಚಿತ್ರ ಮಾರ್ಟಿನ್ ಪ್ರೋಡಕ್ಷನ್ ನಲ್ಲಿ ನಿರ್ಮಾಣವಾಗಲಿದೆ.
’ಚಂಡಿ ಕಂಬೊಲಿಲು ’ ಎನ್ನುವ ಕ್ಯಾಚಿ ಟೈಟಲ್ ಚಿತ್ರಕ್ಕಿದ್ದು ’ಬೆನೆರೆ ಅವಂದಿನಾ ಮಾತಾ ’ ಎನ್ನುವ ಸಬ್ ಟೈಟಲ್ ನ್ನು ಚಿತ್ರಕ್ಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ ಕೊನೆಯ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದಲ್ಲಿ ಯಾರೆಲ್ಲಾ ಕಲಾವಿದರು ಅಭಿನಯಿಸಲಿದ್ದಾರೆ ಅನ್ನೋದು ಇನ್ನಷ್ಟೇ ಅಂತಿಮಗೊಳ್ಳಬೇಕಾಗಿದ್ದು, ಮಂಗಳೂರು , ಉಡುಪಿ , ಮೂಡುಬಿದಿರೆಯ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎನ್ನುವುದು ಸದ್ಯದ ಮಾಹಿತಿ.
ತುಳುಭಾಷೆಯ ಅಭಿಮಾನದಿಂದ ಮತ್ತು ಉತ್ತಮ ಚಿತ್ರವನ್ನು ಕೋಸ್ಟಲ್ ವುಡ್ ಗೆ ಕಾಣಿಕೆಯಾಗಿ ನೀಡಬೇಕು ಎನ್ನುವ ಉತ್ಸಾಹದಿಂದ ಚಂಡಿ ಕಂಬೊಲಿಲು ಚಿತ್ರ ನಿರ್ದೇಶನದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದೇನೆ, ದಗಲ್ ಬಾಜಿಲ್ ಚಿತ್ರದಲ್ಲಿದ್ದ ತಾಂತ್ರಿಕ ತಂಡ ಈ ಚಿತ್ರದಲ್ಲೂ ಮುಂದುವರಿಯಲಿದೆ. ಕಲಾವಿದರ ಆಯ್ಕೆ ಸೇರಿದಂತೆ ಇತರ ಕೆಲಸದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುರೇಶ್ ಅಂಚನ್.
ವರದಿ: ಮಾನಸ