ಮುಂಬೈ, ಅ 22 (DaijiworldNews/DB): ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಅವರ ಸಿನಿ ಜರ್ನಿ ಅತೀ ಕಡಿಮೆ ಅವಧಿಯಲ್ಲಿಯೇ ಬಾಲಿವುಡ್ ತಲುಪಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ನಟಿಯರಿಗೆ ಬಾಲಿವುಡ್ ಪಾದಾರ್ಪಣೆ ಮಾಡಲು ಹಲವು ವರ್ಷಗಳೇ ಹಿಡಿಯುತ್ತವೆ. ಆದರೆ ಕಿರಿಕ್ ಬೆಡಗಿ ವಿಚಾರದಲ್ಲಿ ಇದು ಉಲ್ಟಾವಾಗಿದ್ದು, ಸಣ್ಣ ಅವಧಿಯಲ್ಲಿ ದೊಡ್ಡ ಅದೃಷ್ಟ ಖುಲಾಯಿಸಿದೆ.
ಕೊಡಗಿನ ಬ್ಯೂಟಿ ತಮ್ಮ ಸಿನಿಮಾಗಳಿಗಿಂತ ಹೆಚ್ಚು ಬೇರೆ ಕಾರಣಗಳಿಂದಲೇ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಅಮಿತಾಬ್ ಬಚನ್ ಅವರೊಂದಿಗೆ ಬಾಲಿವುಡ್ನ ಗುಡ್ಬೈ ಸಿನೆಮಾದಲ್ಲಿ ಕಾಣಿಸಿಕೊಂಡಿರುವ ನಟಿ ತಮ್ಮ ಸಿನಿಮಾ ಪ್ರಮೋಶನ್ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು ನಟ ರಣಬೀರ್ ಕಪೂರ್ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ’ಅನಿಮಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿರುವ ರಶ್ಮಿಕಾ ಕಪೂರ್ ಬಗ್ಗೆ ಹಲವು ಮಾಹಿತಿಗಳನ್ನು ಹೇಳಿದ್ದಾರೆ. ಶೂಟಿಂಗ್ ಸೆಟ್ಟನಲ್ಲಿ ರಣಬೀರ್ ಎಲ್ಲಾ ಸಹ ನಟರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರಂತೆ. ಅವರೊಬ್ಬ ಸೈನಿಕನಂತೆ ಕೆಲಸ ಮಾಡುತ್ತಾರೆ ಮತ್ತು ಶಾಂತ ಚಿತ್ತದಿಂದ ಕೆಲಸ ಮಾಡುವ ಸರಳ ವ್ಯಕ್ತಿ ಎಂಬುದಾಗಿ ರಣಬೀರ್ ಕಪೂರ್ ಅವರನ್ನು ಹಾಡಿ ಹೊಗಳಿದ್ದಾರೆ ರಶ್ಮಿಕಾ.
ರಣಬೀರ್ಗಿಂತ ಹೆಚ್ಚು ತುಂಟತನ ನಾನು ಮಾಡುತ್ತೇನೆ. ಅವರು ನನಗೆ ಕಿರಿಕಿರಿ ಮಾಡುವುದು ಕಡಿಮೆ, ನಾನೇ ಅವರಿಗೆ ಹೆಚ್ಚು ಕಿರಿಕಿರಿಯಾಗುವಂತೆ ಮಾಡುತ್ತೇನೆ. ಆದಾಗ್ಯು ಎಲ್ಲವನ್ನು ಸಹಿಸಿಕೊಳ್ಳುತ್ತಾರೆ ಎನ್ನುತ್ತಾರೆ ರಶ್ಮಿಕಾ.