ಚೆನ್ನೈ, ಅ 17 (DaijiworldNews/DB): ಮದುವೆಯಾಗಿ ನಾಲ್ಕೇ ತಿಂಗಳಿಗೆ ಮಗು ಪಡೆದ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಬಗ್ಗೆ ಎಲ್ಲೆಡೆ ಸುದ್ದಿಯಾಗಿತ್ತು. ಹಲವರು ದಂಪತಿಯನ್ನು ಟ್ರೋಲ್ ಮಾಡಿ ತಮಾಷೆಯಾಡಿದ್ದರು. ಆದರೆ ಇದೀಗ ನಯನತಾರಾ- ವಿಘ್ನೇಶ್ ಮದುವೆ ಬಗ್ಗೆ ದೊಡ್ಡ ಸುದ್ದಿಯೊಂದು ಲಭಿಸಿದೆ.
ಅದೆಂದರೆ ಈ ಜೋಡಿ ಆರು ವರ್ಷಗಳ ಹಿಂದೆಯೇ ಮದುವೆಯಾಗಿದ್ದರು ಎನ್ನುವುದು. ಹೌದು. ದಕ್ಷಿಣ ಭಾರತದ ನಟಿ ನಯನತಾರಾ ಮತ್ತು ವಿಘ್ನೇಶ್ ಮದುವೆಯಾದ ನಾಲ್ಕೇ ತಿಂಗಳಿಗೆ ಬಾಡಿಗೆ ತಾಯಿಯಿಂದ ಅವಳಿ ಮಕ್ಕಳನ್ನು ಪಡೆದ ವಿಚಾರವಾಗಿ ತಮಾಷೆ ಹರಿದಾಡುವುದರೊಂದಿಗೆ ಬಾಡಿಗೆ ತಾಯ್ತನದ ನಿಯಮ ಉಲ್ಲಂಘನೆ ಮಾಡಿದ್ದಾರೆಂಬ ಆರೋಪದ ಮೇಲೆ ಅವರ ವಿರುದ್ದ ಪ್ರಕರಣವೂ ದಾಖಲಾಗಿತ್ತು. ಅಲ್ಲದೆಈ ಬಗ್ಗೆ ವಿಚಾರಣೆ ನಡೆಸುವುದಾಗಿ ಸ್ವತಃ ತಮಿಳುನಾಡು ಆರೋಗ್ಯ ಸಚಿವರೂ ಹೇಳಿದ್ದರು.
ಇದೀಗ ಮಗು ಪಡೆದ ವಿಚಾರವಾಗಿ ದಂಪತಿ ನ್ಯಾಯಾಲಯ ಮೆಟ್ಟಿಲು ಹತ್ತಬೇಕಾಗಿ ಬಂದಿದ್ದು, ತಮಿಳುನಾಡು ನ್ಯಾಯಾಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ವಿಶೇಷವೆಂದರೆ ಈ ಅಫಿಡವಿಟ್ನಲ್ಲಿ ತಾವು ಆರು ವರ್ಷಗಳ ಹಿಂದೆಯೇ ಮದುವೆಯಾಗಿರುವ ವಿಷಯವನ್ನು ಉಲ್ಲೇಖಿಸಿದ್ದಾರೆ.
ವಿವಾಹವಾಗಿ ಐದು ವರ್ಷಗಳ ನಂತರ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಅವಕಾಶವಿದೆ. ನಾವು ಮದುವೆಯಾಗಿ ಆರು ವರ್ಷವಾಗಿರುವುದರಿಂದ ಆ ನಿಯಮವನ್ನು ನಾವು ಉಲ್ಲಂಘಿಸಿಲ್ಲ ಎಂದು ದಂಪತಿ ಸ್ಪಷ್ಟನೆ ನೀಡಿದ್ದಾರೆ.
ನಯನತಾರಾ ಅವರ ಆಪ್ತಳಾದ ಮಹಿಳೆಯೇ ಈ ಅವಳಿ ಮಕ್ಕಳನ್ನು ಹೆತ್ತು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.