ಮುಂಬೈ, ಅ 13 (DaijiworldNews/DB): ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಚಿತ್ರರಂಗದಲ್ಲಿ ಬೆಳೆಯುತ್ತಿರುವ ಅರಳು ಪ್ರತಿಭೆ. ಸ್ವಂತ ಪರಿಶ್ರಮದಿಂದ ಬೆಳೆಯುತ್ತಿರುವ ನಟಿಗೆ ನೆಪೋಟಿಸಂ ಸಿಕ್ಕಾಪಟ್ಟೆ ಕೋಪ ತರಿಸಿದ್ಯಂತೆ. ಈ ಬಗ್ಗೆ ಸ್ವತಃ ಜಾನ್ವಿ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಎನ್ನುವ ಕಾರಣಕ್ಕೆ ಜಾನ್ವಿ ಸುಲಭವಾಗಿ ಚಿತ್ರರಂಗಕ್ಕೆ ಎಂಟ್ರಿ ಪಡೆದರೆಂದು ಹಲವರು ಊಹಿಸುತ್ತಿದ್ದಾರೆ. ಆದರೆ ಇದು ಜಾನ್ವಿ ಅವರ ಕೋಪಕ್ಕೆ ಕಾರಣವಾಗಿದೆ. ನಾನೇನು ಸುರ ಸುಂದರಿಯಲ್ಲ, ನನಗೆ ಅಷ್ಟೊಂದು ಪ್ರತಿಭೆ ಇಲ್ಲದೆ ಇರಬಹುದು. ಆದರೆ ತಾಯಿಯ ಸ್ಟಾರ್ಡಮ್ ಹಿಡಿದುಕೊಂಡು ನಾನು ಚಿತ್ರರಂಗಕ್ಕೆ ಬಂದಿಲ್ಲ. ಸೆಟ್ನಲ್ಲಿ ಎಷ್ಟು ಕಷ್ಟ ಪಡುತ್ತೇನೆಂಬುದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಗರಂ ಆಗಿ ಹೇಳುತ್ತಾರೆ ಜಾನ್ವಿ.
ನಿರ್ಮಾಪಕ ಬೋನಿ ಕಪೂರ್-ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ 2018ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆಕೆಯನ್ನು ಕರಣ್ ಹೋಹರ್ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆದರೆ ಚಿತ್ರರಂಗದಲ್ಲಿ ಚಾನ್ಸ್ ಸಿಕ್ಕಿರುವುದು ಅದೃಷ್ಟದಿಂದಲ್ಲ, ಅದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಕೆಲವರು ಕೇವಲವಾಗಿ ಮಾತನಾಡಿ ಆ ಶ್ರಮಕ್ಕೆ ಬೆಲೆಯೇ ಇಲ್ಲದಂತೆ ಮಾಡುತ್ತಾರೆ ಎಂದು ಬೇಸರಗೊಂಡಿದ್ದಾರೆ ನಟಿ.
ಸದ್ಯ ಮಲಯಾಳಂನ 'ಹೆಲೆನ್' ಚಿತ್ರದ ರೀಮೆಕ್ ಆಗಿರುವ ಜಾನ್ವಿ ಕಪೂರ್ ನಟನೆಯ 'ಮಿಲಿ' ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಜಾನ್ವಿ ಬಿಎಸ್ಸಿ ನರ್ಸಿಂಗ್ ಗ್ರಾಜ್ಯುಯೇಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಂದೆ, ನಿರ್ಮಾಪಕ ಬೋನಿ ಕಪೂರ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ನವೆಂಬರ್ 4ಕ್ಕೆ ಬಿಡುಗಡೆಗೊಳ್ಳಲಿದೆ.