ಮುಂಬೈ, ಅ 12 (DaijiworldNews/DB): ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗಾಸಿಪ್ ಇತ್ತೀಚೆಗಷ್ಟೇ ಹಬ್ಬಿತ್ತು. ಈ ನಡುವೆ ನಾವಿಬ್ಬರೂ ಸ್ವಲ್ಪ ಸಮಯದಿಂದ ಒಟ್ಟಿಗಿಲ್ಲ ಎಂಬುದಾಗಿ ದೀಪಿಕಾ ಹೇಳಿಕೊಂಡಿದ್ದಾರೆ.
ದೀಪಿಕಾ-ರಣವೀರ್ ಮಧ್ಯೆ ಹಲವಾರು ಗಾಸಿಪ್ಗಳು ಇತ್ತೀಚೆಗೆ ಹರಿದಾಡುತ್ತಿದ್ದವು. ದಂಪತಿ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬುದಾಗಿ ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ ಉಮೈರ್ ಸಂಧು ಮಾಡಿರುವ ಪೋಸ್ಟ್ ಈ ಗಾಸಿಪ್ಗಳು ಉಂಟಾಗಲು ಕಾರಣವಾಗಿತ್ತು. ಪ್ರೀತಿಸಿ ಮದುವೆಯಾದ ಜೋಡಿ ಇಷ್ಟು ಬೇಗ ದೂರವಾದರೇ ಎಂಬುದಾಗಿ ಅಭಿಮಾನಿಗಳೂ ವ್ಯಥೆ ಪಟ್ಟುಕೊಂಡಿದ್ದರು. ಆದರೆ ತಮ್ಮ ಬಗ್ಗೆ ಹಬ್ಬಿರುವ ಗಾಸಿಪ್ಗಳಿಗೆ ಸ್ವತಃ ದೀಪಿಕಾ ಮತ್ತು ರಣವೀರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆನಂತರ ಗಾಸಿಪ್ ದೊಡ್ಡದಾಗುತ್ತದೆ ಎಂದರಿತ ರಣವೀರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಾಕಿ 2012ರಲ್ಲಿ ನಾನೂ ದೀಪಿಕಾ ಡೇಟಿಂಗ್ ಆರಂಭಿಸಿದ್ದು, 2022ಕ್ಕೆ ಹತ್ತು ವರ್ಷವಾಯ್ತು ಎನ್ನುವ ಮೂಲಕ ಎಲ್ಲಾ ಗಾಸಿಪ್ಗಳಿಗೆ ತೆರೆ ಎಳೆದಿದ್ದರು. ಇದೀಗ ಗಾಸಿಪ್ ಹರಡಿ ಹಲವಾರು ದಿನಗಳ ನಂತರ ದೀಪಿಕಾ ಮಾತನಾಡಿದ್ದು, ಸ್ವಲ್ಪ ಸಮಯದಿಂದ ತಾನೂ, ರಣವೀರ್ ಒಟ್ಟಿಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಆದರೆ ದೀಪಿಕಾ ಮಾತಿನರ್ಥ ಅವರಿಬ್ಬರೂ ಕಿರಿಕ್ ಮಾಡಿಕೊಂಡು ದೂರ ಇದ್ದಾರೆಂದಲ್ಲ. ಬಣ್ಣದ ಲೋಕ ಎಂದ ಮೇಲೆ ಸದಾ ಹಲವಾರು ಸಿನೆಮಾಗಳಲ್ಲಿ ನಟಿಸುವುದಕ್ಕಾಗಿ ಬ್ಯುಸಿ ಇರಬೇಕಾಗುತ್ತದೆ. ಕೆಲ ದಿನಗಳ ಮಟ್ಟಿಗೆ ಪತಿ, ಪತ್ನಿ, ಮಕ್ಕಳಿಂದ ದೂರವಿದ್ದು, ಶೂಟಿಂಗ್ನಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ರಣವೀರ್ ಮತ್ತು ದೀಪಿಕಾ ಇದೇ ಕಾರಣಕ್ಕಾಗಿ ಸ್ವಲ್ಪ ದಿನಗಳಿಂದ ದೂರ ದೂರ ಇದ್ದಾರಂತೆ. ಇಬ್ಬರೂ ಸಿನೆಮಾ ಕೆಲಸದ ಕಾರಣಕ್ಕಾಗಿ ಪ್ರತ್ಯೇಕ ನಗರಗಳಲ್ಲಿದ್ದಾರೆ.
ಪತಿ ಒಂದು ವಾರ ಕಾಲ ಮ್ಯೂಸಿಕ್ ಕಾರ್ಯಕ್ರಮವೊಂದರಲ್ಲಿ ಬ್ಯುಸಿ ಇದ್ದು, ಈಗಷ್ಟೇ ಮನೆಗೆ ಹಿಂತಿರುಗಿದ್ದಾರೆ. ನನ್ನನ್ನು ನೋಡಿ ಅವರಿಗೆ ತುಂಬಾ ಖುಷಿಯಾಯಿತು ಎಂದು ದೀಪಿಕಾ ಅವರೂ ಫುಲ್ ಖುಷ್ ಆಗಿದ್ದಾರೆ.