ಬೆಂಗಳೂರು, ಅ 03 (DaijiworldNews/DB): ರೆಬೆಲ್ ಸ್ಟಾರ್ ದಿ. ಅಂಬರೀಶ್ ಅವರ ಪುತ್ರ, ನಟ ಅಭಿಷೇಕ್ ಅಂಬರೀಶ್ ಚಿತ್ರರಂಗದಲ್ಲಿ ಬೆಳೆಯುತ್ತಿರುವ ಪ್ರತಿಭೆ. ತಮ್ಮ ಸರಳ ನಡೆ-ನುಡಿಗಳ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಅಭಿಷೇಕ್ ಸ್ಯಾಂಡಲ್ವುಡ್ ಹ್ಯಾಂಡ್ಸಮ್ ಹೀರೋಗಳಲ್ಲಿ ಒಬ್ಬರು.
ಇಂದು ಅಭಿಷೇಕ್ ಅಂಬರೀಶ್ ಅವರ ಜನ್ಮದಿನ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಂಡಿರುವ ಅಭಿಷೇಕ್ ಸಖತ್ತಾಗಿ ಪಾರ್ಟಿಯನ್ನೂ ಅಭಿಮಾನಿಗಳಿಗಾಗಿ ಆಯೋಜಿಸಿದ್ದಾರೆ. ತಾಯಿ, ಸಂಸದೆ ಸುಮಲತಾ ಅವರೂ ಮಗನ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಮಗನ ಮದುವೆ ಬಗ್ಗೆ ಸುದ್ದಿಗಾರರು ಸುಮಲತಾರನ್ನು ಪ್ರಶ್ನಿಸಿದ್ದಾರೆ.
ಅಭಿಷೇಕ್ ಮದುವೆ ಯಾವಾಗ ಎಂದು ಪ್ರಶ್ನಿಸಿದಕ್ಕೆ ನಕ್ಕ ಸುಮಲತಾ, ಇದನ್ನು ನೀವು ನನ್ನಲ್ಲಿ ಕೇಳುವುದಕ್ಕಿಂತ ಅವನಲ್ಲೇ ಕೇಳಿದರೆ ಉತ್ತಮ ಎಂದು ಮಗನತ್ತ ತಿರುಗಿ ನಕ್ಕರು. ಇನ್ನು ತಾಯಿ ಮಾತಿಗೆ ಪಕ್ಕದಲ್ಲೇ ಇದ್ದ ಅಭಿಷೇಕ್ ಕೂಡಾ ನಕ್ಕು ಸುಮ್ಮನಾಗಿದ್ದಾರೆ.
ಸದ್ಯ ಹಲವು ಚಿತ್ರಗಳಲ್ಲಿ ನಟಿಸಲು ಅಭಿಷೇಕ್ ಬ್ಯುಸಿಯಾಗಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.