ಮುಂಬೈ, ಸೆ 29 (DaijiworldNews/DB): ಬಾಲಿವುಡ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ನಿನ್ನೆಯಿಂದ ಹೀಗೊಂದು ಸುದ್ದಿ ಹರಿದಾಡುತ್ತಿದ್ದು, ಸ್ಟಾರ್ ದಂಪತಿಯ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.
ಅಷ್ಟಕ್ಕೂ ಈ ಸುದ್ದಿ ಹರಿದಾಡಲು ಕಾರಣ ಆ ಒಂದು ಟ್ವೀಟ್. ವಿದೇಶಿ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯರಾಗಿರುವ ಉಮೈರ್ ಸಂಧು ಎಂಬುವವರು ತಮ್ಮ ಟ್ವೀಟರ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ರಣವೀರ್-ದೀಪಿಕಾ ಅಭಿಮಾನಿಗಳ ನಿದ್ದೆಗೆಡಿಸಿದೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ಎಲ್ಲವೂ ಸರಿ ಇಲ್ಲ ಎಂದು ಉಮೈರ್ ಸಂಧು ಪೋಸ್ಟ್ ಮಾಡಿದ್ದಾರೆ. ಭಾರತದ ಸಿನೆಮಾ ವಿಮರ್ಶೆ ಮಾಡುವ ಸಂಧು ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ದಿ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರ ಟ್ವೀಟ್ ಮಹತ್ವ ಪಡೆದುಕೊಂಡಿದ್ದು, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.
ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಣವೀರ್ ಸಿಂಗ್, 2012ರಲ್ಲಿ ನನ್ನ ಮತ್ತು ದೀಪಿಕಾ ನಡುವೆ ಡೇಟಿಂಗ್ ಶುರುವಾಗಿತ್ತು. ಈ ವರ್ಷಕ್ಕೆ ನಮ್ಮ ಡೇಟಿಂಗ್ ಜೀವನಕ್ಕೆ ಹತ್ತು ವರ್ಷವಾಯಿತು ಎಂದು ಹೇಳಿಕೊಂಡಿದ್ದರು. ಆದರೆ ಇದಾದ ಬಳಿಕ ನಿನ್ನೆಯಷ್ಟೇ ಸಂಧು ಮಾಡಿರುವ ಟ್ವೀಟ್ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಅದೇನೇ ಇದ್ದರೂ, ಈ ಟ್ವೀಟ್ನ ನಿಜಾಂಶವೇನು ಎಂಬುದನ್ನು ಸ್ವತಃ ದೀಪಿಕಾ ಮತ್ತು ರಣವೀರ್ ಅವರೇ ಸ್ಪಷ್ಟಪಡಿಸಬೇಕಿದೆ.