ಮುಂಬೈ, ಸೆ 28 (DaijiworldNews/DB): ಸ್ಟಾರ್ ನಟ-ನಟಿಯರು ಎಲ್ಲಿ ಹೋದರೂ ಅಭಿಮಾನಿಗಳು ಮುತ್ತಿಕೊಂಡು ಅಟೋಗ್ರಾಫ್, ಫೋಟೋಗೆ ಹಾತೊರೆಯುವುದು ಸರ್ವೇ ಸಾಮಾನ್ಯ. ಸೆಲ್ಫೀಗೆ ಮುಗಿಬೀಳುವುದು, ಮಾತನಾಡುವುದು, ಅಟೋಗ್ರಾಫ್ ಹಾಕಿಸಿಕೊಳ್ಳುವುದು ನಡೆದೇ ಇರುತ್ತದೆ.
ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗಂತೂ ಎಲ್ಲಿ ಹೋದರೂ ಫ್ಯಾನ್ಸ್ ದುಂಬಾಲು ಬೀಳುತ್ತಲೇ ಇರುತ್ತಾರೆ. ಸದ್ಯ ರಶ್ಮಿಕಾ ಗುಡ್ ಬೈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಅಭಿಮಾನಿಯೊಬ್ಬ ಓಡೋಡಿ ಬಂದು ರಶ್ಮಿಕಾಗೆ ವಿಚಿತ್ರ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾನೆ. ನಾನು ನಿಮ್ಮ ದೊಡ್ಡ ಫ್ಯಾನ್ ಎಂದೇಳಿ ಪರಿಚಯ ಮಾಡಿಕೊಂಡ ಆ ಅಭಿಮಾನಿ ರಶ್ಮಿಕಾ ಜೊತೆ ಫೋಟೋವನ್ನೂ ತೆಗೆಸಿಕೊಂಡಿದ್ದಾನೆ. ಬಳಿಕ ಅಟೋಗ್ರಾಫ್ ಕೇಳಿದ್ದಾನೆ. ಆದರೆ ಪುಸ್ತಕದ ಹಾಳೆಯ ಮೇಲೆಯೋ, ಕೈ ಮೇಲೆಯೋ ಅಲ್ಲ. ಎದೆ ಮೇಲೆ ಅಟೋಗ್ರಾಫ್ ಹಾಕುವಂತೆ ದುಂಬಾಲು ಬಿದ್ದಿದ್ದಾನೆ. ಅಭಿಮಾನಿಯ ಆಸೆಗೆ ಅಷ್ಟೇ ಖುಷಿಯಿಂದ ರಶ್ಮಿಕಾರೂ ಸ್ಪಂದಿಸಿದ್ದಾರೆ. ತಮ್ಮ ಬ್ಯಾಗ್ನಲ್ಲಿದ್ದ ಮಾರ್ಕರ್ ತೆಗೆದು ಆತನ ಎದೆ ಮೇಲೆ ಅಟೋಗ್ರಾಫ್ ಹಾಕಿದ್ದಾರೆ. ನೆಚ್ಚಿನ ನಟಿ ತನ್ನಿಷ್ಟದ ಉಡುಗೊರೆ ನೀಡಿದ್ದಕ್ಕೆ ಅಭಿಮಾನಿ ಫುಲ್ ಖುಷಿಯಾಗಿದ್ದಾನೆ. ಇದನ್ನು ಅಲ್ಲೇ ಇದ್ದವರು ವೀಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅಭಿಮಾನಿಯ ಬೇಡಿಕೆಗೆ ಸ್ಪಂದಿಸಿದ ರಶ್ಮಿಕಾ ಬಗ್ಗೆ ನಡೆಗೆ ಇನ್ನಷ್ಟು ಫ್ಯಾನ್ಸ್ ಫಿದಾ ಆಗಿದ್ದಾರೆ.
ಪುಷ್ಪಾ ಸಿನೆಮಾ ಗೆಲುವು ಕಂಡ ಬಳಿಕ ರಶ್ಮಿಕಾ ಇನ್ನಷ್ಟು ಶೈನ್ ಆಗುತ್ತಿದ್ದಾರೆ. ಇದೀಗ ಅವರು ಬಾಲಿವುಡ್ಗೂ ಕಾಲಿಟ್ಟಿದ್ದು, ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್ ಬೈ ಸಿನೆಮಾದಲ್ಲಿ ನಟಿಸಿದ್ದಾರೆ. ಅಕ್ಟೋಬರ್ 7ರಂದು ಗುಡ್ಬೈ ಚಿತ್ರ ಬಿಡುಗಡೆಯಾಗಲಿದ್ದು, ರಶ್ಮಿಕಾ ಫ್ಯಾನ್ಸ್ ಚಿತ್ರ ವೀಕ್ಷಣೆಗೆ ಕಾತರರಾಗಿದ್ದಾರೆ.