ಉಳ್ಳಾಲ, ಸೆ.26 (DaijiworldNews/HR): ತುಳು ಭಾಷೆ ಇಂದು ಜಗತ್ತಿನಾದ್ಯಂತ ಮಾತನಾಡಲು ತುಳು ಸಿನಿಮಾಗಲೇ ಕಾರಣ. ತುಳು ಭಾಷೆ ಮಾತನಾಡುವುದನ್ನೇ ಜನ ಮರೆಯುತ್ತಾರೆ ಅನ್ನುವ ಭಯವಿತ್ತು, ಆದರೆ ಇದೀಗ ತುಳುಸಿನಿಮಾಗಳ ಬೆಳವಣಿಗೆಯಿಂದ ತುಳು ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.
ಕುಂಪಲ ಬಲ್ಯ ನಡುಪೊಲಿಕೆ ಕೊರಗಜ್ಜ ಕ್ಷೇತ್ರ ದಲ್ಲಿ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಅರ್ಪಿಸುವ ಪ್ರೊಡಕ್ಷನ್ ನಂ-1 ತುಳು ಚಲನಚಿತ್ರದ ಮುಹೂರ್ತ ಸಮಾರಂಭ, ಬ್ಯಾನರ್ ಮತ್ತು ಟೈಟಲ್ ಲಾಂಚ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರನ್ನು ಖುಷಿಯಾಗಿರಿಸಲು ಚಲನಚಿತ್ರಗಳು ಕಾರಣ. ಪ್ರಾಡಕ್ಷನ್ ನಂ.1 ಚಲನಚಿತ್ರ ತಂಡದ ಶ್ರಮಕ್ಕೆ ಜಯ ಸಿಗಲಿ. ದ.ಕ, ಕರಾವಳಿ ಪ್ರದೇಶ ಮಾತ್ರವಲ್ಲ ವಿದೇಶದಲ್ಲಿಯೂ ಚಲನಚಿತ್ರ ಪಸರಿಸಲಿ ಎಂದು ಶುಭಹಾರೈಸಿದರು.
ಚಲನಚಿತ್ರ ನಟ ಭೋಜರಾಜ್ ವಾಮಂಜೂರು ಮಾತನಾಡಿ, ಐಸಬಾಸ್ ಚಿತ್ರದ ಹೆಸರೇ ಕಚಗುಳಿಯಿಡುವಂತಿದೆ. ತಂಡ ನಿರೀಕ್ಷೆಯಿರಿಸಿ ತಯಾರಿಸುತ್ತಿರುವ ಚಿತ್ರ. ಹಾಕಿದ ಹಣ ಎಲ್ಲವೂ ಬರಲಿ. ಪ್ರೀತಿ ಆಶೀರ್ವಾದ ಎಲ್ಲ ಜನರಿಂದ ದೊರಕಲಿ. ಜನ ಮೊಬೈಲಿನಲ್ಲಿ ಚಿತ್ರ ನೋಡದೇ ಟಾಕೀಸಿಗೇ ಬಂದೇ ಚಿತ್ರವನ್ನು ವೀಕ್ಷಿಸಿ ತಂಡಕ್ಕೆ ಬೆನ್ನುತಟ್ಟಿ ಎಂದರು.
ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ತುಳು ಭಾಷೆಯ ಜೀಟಿಕೆ ಸಿನಿಮಾಗೆ ರಾಷ್ಟ್ರಪ್ರಶಸ್ತಿ ದೊರೆತ ದಿನವಿದು. ಬಹಳಷ್ಟು ಭಾಷೆಗಳ ನಡುವೆ ಹೋರಾಡಿ ದೊರೆತ ಪ್ರಶಸ್ತಿಯಾಗಿತ್ತು. ಪ್ರಾಡಕ್ಷನ್ ನಂ-1 ತಂಡದ ಐಸಬಾಸ್ ಚಿತ್ರ ತುಳು ಸಿನಿಮಾಗಳಲ್ಲಿ ವಿಭಿನ್ನ ಸಿನೆಮಾ ಆಗಿ ಮೂಡಿಬರಲಿ ಎಂದು ಶುಭಹಾರೈಸಿದರು.
ಬಿಜೆಪಿ ಜಿಲ್ಲಾ ಮುಖಂಡ ಚಂದ್ರಶೇಖರ್ ಉಚ್ಚಿಲ್,ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ,ನಡುಪೊಳಿಕೆ ಕೊರಗಜ್ಜ ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಪ್ಪ ಮೂಲ್ಯ, ಪ್ರೊಡಕ್ಷನ್ ನಂ.1 ಚಿತ್ರದ ನಿರ್ದೇಶಕ ಜಯಪ್ರಸಾದ್ ಪೂಜಾರಿ ,ಜಿಲ್ಲಾ ಕಾಂಗ್ರೆಸ್ ಸದಸ್ಯ ಸುರೇಶ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು.