ಮುಂಬೈ, ಸೆ 24 (DaijiworldNews/DB): ಚಿತ್ರ ವಿಚಿತ್ರ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಲ್ಲಿ ನಟಿ ಉರ್ಫಿ ಒಂದೆಜ್ಜೆ ಮುಂದೆ. ಚಿಟ್ಟೆ, ಗೋಣಿಚೀಲಗಳಿಂದ ಮಾಡಿದ ಬಟ್ಟೆಯಲ್ಲಿ ಕಾಣಿಸಿಕೊಂಡು ಟ್ರೋಲ್ಗೊಳಗಾಗಿದ್ದ ನಟಿ ಇದೀಗ ಸಿಮ್ ಕಾರ್ಡ್ ಬಟ್ಟೆ ಧರಿಸಿ ಪೊಲೀಸರೇ ಹುಡುಕಿಕೊಂಡು ಬರುವಂತೆ ಮಾಡಿದ್ದಾರೆ.
ಹೌದು. ವಿಚಿತ್ರ ಬಟ್ಟೆಗಳ ಮೂಲಕ ಕಾಣಿಸಿಕೊಳ್ಳುವ ಉರ್ಫಿ ಅವರ ಅವತಾರಕ್ಕೆ ಅಭಿಮಾನಿಗಳೇ ದಂಗಾಗುತ್ತಾರೆ. ಬಿಗ್ಬಾಸ್ ಮನೆಯೊಳಗೆ ಕಾಲಿಟ್ಟಿದ್ದ ಉರ್ಫಿ ಜಾವೇದ್ ಅಲ್ಲಿಯೂ ವಿಚಿತ್ರ ಬಟ್ಟೆಗಳನ್ನು ಧರಿಸುತ್ತಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಅವರ ಇನ್ನೊಂದು ಅವತಾರ ಹರಿದಾಡುತ್ತಿದ್ದು, ಈ ಬಟ್ಟೆ ಧರಿಸಿದ್ದಕ್ಕಾಗಿ ಪೊಲೀಸರೇ ಉರ್ಫಿಯನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಅಷ್ಟಕ್ಕೂ ಉರ್ಫಿ ಧರಿಸಿರುವ ಬಟ್ಟೆ ಸಿಮ್ ಕಾರ್ಡ್ನಿಂದ ಮಾಡಿರುವಂತದ್ದು. 2 ಲಕ್ಷ ರೂ. ಬೆಲೆ ಬಾಳುವ ಸಿಮ್ ಕಾರ್ಡ್ ಡ್ರೆಸ್ನ್ನು ಉರ್ಫಿ 2.20 ಲಕ್ಷ ರೂ. ನೀಡಿ ಖರೀದಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣದಲ್ಲಿ ಖರೀದಿಸಿದ ಡ್ರೆಸ್ ಮೇಲೆ ಪೊಲೀಸರ ಕೆಂಗಣ್ಣು ಬಿದ್ದಿರುವುದೇಕೆ ಎಂಬ ಪ್ರಶ್ನೆ ಕಾಡುವುದು ಸಹಜ. ಅದರ ಅಸಲಿ ಕತೆ ಇಲ್ಲಿದೆ.
ಅಷ್ಟಕ್ಕೂ ಉರ್ಫಿ ಧರಿಸಿರುವ ಸಿಮ್ ಕಾರ್ಡ್ ಬಟ್ಟೆ ಕಥೆ ರಿಯಲ್ ಅಲ್ಲ, ರೀಲ್. ಉರ್ಫಿ ನಟಿಸಿರುವ 'ಜಮ್ತಾರಾ ಸೀಸನ್ 2' ಚಿತ್ರದ ಪ್ರಚಾರಕ್ಕಾಗಿ ಉರ್ಫಿ ಸಿಮ್ ಕಾರ್ಡ್ ಬಟ್ಟೆ ಧರಿಸಿರುವುದು ಮತ್ತು ಪೊಲೀಸರು ಇದಕ್ಕಾಗಿ ಆಕೆಯನ್ನು ಹುಡುಕಿಕೊಂಡು ಬರುವುದನ್ನು ತೋರಿಸಲಾಗಿದೆ. ಏಕೆಂದರೆ ಇದು ವಂಚನೆ ಮಾಡಲ್ಪಟ್ಟ ಸಿಮ್ಕಾರ್ಡ್ಗಳಿಂದ ತಯಾರಿಸಲಾದ ಬಟ್ಟೆ. ಮೋನಿಕಾ ಪನ್ವಾರ್ ಮತ್ತು ಸ್ಪರ್ಶ್ ಶ್ರೀವಾಸ್ತವ್ ಅವರು ಸಿಮ್ ಕಾರ್ಡ್ ಬಟ್ಟೆಯನ್ನು ಉರ್ಫಿಗೆ ಮಾರಾಟ ಮಾಡಿ ಅಲ್ಲಿಂದ ಪರಾರಿಯಾಗುತ್ತಾರೆ. ಆದರೆ ಇದು ವಂಚಿಸಲ್ಪಟ್ಟ ಸಿಮ್ ಕಾರ್ಡ್ನಿಂದ ಮಾಡಿರುವ ಬಟ್ಟೆ ಎಂಬುದು ಉರ್ಫಿಗೆ ಪೊಲೀಸರು ಬಂದಾಗಲೇ ತಿಳಿಯುತ್ತದೆ. ಸದ್ಯ ಈ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬರೋಬ್ಬರಿ 2000 ಸಿಮ್ಕಾರ್ಡ್ಗಳನ್ನು ಬಳಸಿಕೊಂಡು ಬಟ್ಟೆ ತಯಾರಿಸಲಾಗಿದೆ.