ಬೆಂಗಳೂರು,ಫೆ 10 (MSP): ‘ಭೈರಾದೇವಿ’ ಚಿತ್ರದ ಶೂಟಿಂಗ್ ವೇಳೆ ನಟಿ ರಾಧಿಕಾ ಕುಮಾರಸ್ವಾಮಿ ಕಾಲುಜಾರಿ ಬಿದ್ದು ತೀವ್ರ ಗಾಯಗೊಂಡಿದ್ದಾರೆ.
ಮೂರು ದಿನಗಳ ಹಿಂದೆ ರಾತ್ರಿ ಬೆಂಗಳೂರಿನ ಶಾಂತಿನಗರದ ಸ್ಮಶಾನದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗೋರಿಯೊಂದರ ಮೇಲೆ ಅಘೋರಿ ಗೆಟಪ್ನಲ್ಲಿದ್ದ ರಾಧಿಕಾ ತ್ರಿಶೂಲ ಹಿಡಿದು ನೃತ್ಯ ಮಾಡುತ್ತಿದ್ದರು. ಆ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಅವರ ಸ್ಪೈನಲ್ ಕಾರ್ಡ್ ಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.ಶ್ರೀಜೈ ನಿರ್ದೇಶನದ ಈ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು.ಘಟನೆ ನಡೆದ ತಕ್ಷಣ ರಾಧಿಕಾಗೆ ಚಿಕಿತ್ಸೆ ಕೊಡಿಸಲಾಗಿದ್ದು, ತೀವ್ರವಾಗಿ ಪೆಟ್ಟುಬಿದ್ದಿರುವುದರಿಂದ ನಡೆಯಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆಂದು ಮೂಲಗಳು ತಿಳಿಸಿವೆ. ಇದಲ್ಲದೆ ಇನ್ನೊಂದು ತಿಂಗಳು ಕಾಲ ಅವರು ಓಡಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹಾಗಾಗಿ, ಸಿನಿಮಾದ ಚಿತ್ರೀಕರಣವನ್ನು ಮುಂದೂಡಲಾಗಿದೆ.
ಈ ಸಿನಿಮಾಕ್ಕೆ ರಾಧಿಕಾ ಅವರೇ ಬಂಡವಾಳ ಹೂಡಿದ್ದಾರೆ. ಸ್ವಂತ ಬ್ಯಾನರ್ ಆದ ಶಮಿಕಾ ಎಂಟರ್ ಪ್ರೈಸಸ್ನಡಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಭೈರಾದೇವಿಯ ಮತ್ತೊಂದು ಹೆಸರು ಕಾಳಿ. ಹಾಗಾಗಿ, ಈ ಸಿನಿಮಾದಲ್ಲಿ ರಾಧಿಕಾ ಕಾಳಿ ಮತ್ತು ಅಘೋರಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ , ರವಿಶಂಕರ್ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.