ಮಂಗಳೂರು, ಆ 13 (DaijiworldNews/DB): ನಟ ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ತುಳು ಚಿತ್ರ 'ಅಬತಾರ' ಆಗಸ್ಟ್ 18ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ನಟ, ನಿರ್ದೇಶಕ ಮತ್ತು ಚಿತ್ರಕತೆ ಬರಹಗಾರ ದೇವದಾಸ್ ಕಾಪಿಕಾಡ್ ಅವರು ಚಿತ್ರಕ್ಕೆ ಕತೆ ಬರೆದಿದ್ದಾರೆ. ನಿರ್ದೇಶನದೊಂದಿಗೆ ಮುಖ್ಯ ಪಾತ್ರದಲ್ಲಿಯೂ ಅರ್ಜುನ್ ಕಾಪಿಕಾಡ್ ಕಾಣಿಸಿಕೊಳ್ಳಲಿದ್ದಾರೆ. ಬೊಳ್ಳಿ ಕ್ರಿಯೇಶನ್ಸ್ ಮತ್ತು ಅವಿಕಾ ಪ್ರೊಡಕ್ಷನ್ಸ್ ಬ್ಯಾನರ್ನಡಿ ನಿಖಿಲ್ ಕೀರ್ತಿ ಸಾಲ್ಯಾನ್ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಿತ್ರದ ಕುರಿತು ಮಾಹಿತಿ ನೀಡಿದ ನಟ, ಚಿತ್ರದ ನಿರ್ದೇಶಕ ಅರ್ಜುನ್ ಕಾಪಿಕಾಡ್, ಕಾಮಿಡಿ ಮತ್ತು ಉತ್ತಮ ಸಾಮಾಜಿಕ ಸಂದೇಶವನ್ನೊಳಗೊಂಡ ಚಿತ್ರ ಇದಾಗಿದೆ. ವೀಕ್ಷಕರ ನಿರೀಕ್ಷೆಗೆ ತಕ್ಕಂತೆ ಚಿತ್ರವನ್ನು ನಿರ್ಮಿಸಲಾಗಿದೆ. ಮಂಗಳೂರು ಹಾಗೂ ಸುತ್ತಮುತ್ತ ಚಿತ್ರವು ಚಿತ್ರೀಕರಣಗೊಂಡಿದೆ. ಕೋವಿಡ್-19 ಮತ್ತು ಲಾಕ್ಡೌನ್ ಕಾರಣದಿಂದಾಗಿ ಚಿತ್ರ ಬಿಡುಗಡೆ ತಡವಾಗಿತ್ತು. ಇದೀಗ ಕೇವಲ ಕರಾವಳಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಚಿತ್ರ ಬಿಡುಗಡೆಗೊಳ್ಳುತ್ತಿದೆ ಎಂದರು.
ಆಗಸ್ಟ್ 18ರಂದು ಭಾರತ್ ಮಾಲ್, ಪಿವಿಆರ್, ಸಿನೆ ಪೊಲೀಸ್, ಉಡುಪಿ, ಮಣಿಪಾಲ, ಕಾರ್ಕಳ, ಪುತ್ತೂರು, ಸುಳ್ಯ ಸೇರಿದಂತೆ 15 ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ. ಬಳಿಕ ಮುಂಬೈ, ಬೆಂಗಳೂರು, ಕಾಸರಗೋಡು, ಮುಳ್ಳೇರಿಯ, ಸಕಲೇಶಪುರ, ಶುಂಠಿಕೊಪ್ಪ, ತೀರ್ಥಹಳ್ಳಿ, ಕುಂದಾಪುರ, ಶಿವಮೊಗ್ಗ ಮುಂತಾದೆಡೆ ಬಿಡುಗಡೆಗೊಳ್ಳಲಿದೆ. ಆಗಸ್ಟ್ 16 ಮತ್ತು17ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅನಾಥಾಶ್ರಮದ ಮಕ್ಕಳಿಗೆ ಉಚಿತ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದೆ. ಸೆಪ್ಟಂಬರ್ 2ರಂದು ವಿದೇಶಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಅರ್ಜುನ್ ಕಾಪಿಕಾಡ್ ಅವರೊಂದಿಗೆ ನಟಿಯರಾದ ಗಾನಾ ಭಟ್ ಹಾಗೂ ಕ್ರಿಸ್ಟಿನಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ನಟರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿ ಕೃಷ್ಣ, ಶಾನಿಲ್ ಗುರು, ಚೇತನ್ ರೈ ಮಾಣಿ, ಲಕ್ಷ್ಮೀಶ್, ಸುನಿಲ್ ಚಿತ್ರಾಪುರ ನಟಿಸಿದ್ದಾರೆ. ಚಿತ್ರದಲ್ಲಿರುವ ’ಬಿನ್ನೆರ್ ಬೈದಿನ’ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆಗೊಂಡಂದಿನಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ.
ನಟಿಯರಾದ ಗಾನಾ ಭಟ್, ಕ್ರಿಸ್ಟಿನಾ ಜಾರ್ಜ್, ನಟರಾದ ನವೀನ್ ಡಿ. ಪಡೀಲ್, ಸಾಯಿ ಕೃಷ್ಣ, ಶಾನಿಲ್ ಗುರು, ನಿರ್ಮಾಪಕಿ ಶರ್ಮಿಳಾ ಕಾಪಿಕಾಡ್, ನಿರ್ಮಾಪಕ ನಿಖಿಲ್ ಕೀರ್ತಿ ಸಾಲ್ಯಾನ್, ಸಹ ನಿರ್ಮಾಪಕ ವೀರಾಜ್ ಅತ್ತಾವರ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.