ಬೆಂಗಳೂರು, ಜು 28 (DaijiworldNews/DB): ಡ್ಯೂಪ್ ಇಲ್ಲದೆ ಆಕ್ಷನ್ ದೃಶ್ಯದಲ್ಲಿ ನಟಿಸಲು ಹೋಗಿ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರ ’ಕ್ರೀಮ್’ನ ಚಿತ್ರೀಕರಣದ ವೇಳೆ ಘಟನೆ ಸಂಭವಿಸಿದೆ.
ನಗರದ ಕಂಠೀರವ ಸ್ಟುಡಿಯೋದಲ್ಲಿ 'ಕ್ರೀಮ್' ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಆಕ್ಷನ್ ದೃಶ್ಯವೊಂದಕ್ಕೆ ಡ್ಯೂಪ್ ಬಳಸಲು ನಿರ್ದೇಶಕರು ಹೇಳಿದ್ದಾರೆ. ಆದರೆ ಅದಕ್ಕೊಪ್ಪದ ಸಂಯುಕ್ತಾ ತಾವೇ ಆಕ್ಷನ್ ದೃಶ್ಯಗಳಲ್ಲಿ ಮುಂದಾಗಿದ್ದಾರೆ. ಈ ವೇಳೆ ಕಿಕ್ ಮಾಡುವಾಗ ಕಾಲಿನ ಮೂಳೆ ಸರಿದು ಗಾಯವಾಗಿದೆ. ಅಲ್ಲೇ ಕುಸಿದು ಬಿದ್ದ ನಟಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡಿರುವ ಸಂಯುಕ್ತಾಗೆ ಒಂದು ತಿಂಗಳು ರೆಸ್ಟ್ ಬೇಕೆಂದು ವೈದ್ಯರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಯುಕ್ತಾ ಹೆಗ್ಡೆ, ನಾನು ಮಾರ್ಷಲ್ ಆರ್ಟ್ ಕಲಿತಿರುವುದರಿಂದ ಫೈಟ್ ದೃಶ್ಯಕ್ಕೆ ಡ್ಯೂಪ್ ಇಲ್ಲದೆ ನಟಿಸಲು ಮುಂದಾದೆ. ಈ ವೇಳೆ ಕಾಲು ಸ್ಲಿಪ್ ಆಗಿ ಮೂಳೆ ಸರಿಯಿತು. ಒಂದು ತಿಂಗಳು ವಿಶ್ರಾಂತಿ ಬೇಕೆಂದು ವೈದ್ಯರು ಸೂಚಿಸಿದ್ದಾರೆ ಎಂದರು.