ಮುಂಬೈ, ಜು 23 (DaijiworldNews/DB): 'ಏಕ್ ವಿಲನ್ ರಿಟರ್ನ್ಸ್' ಚಿತ್ರದಲ್ಲಿ ದಿಶಾ ಪಟಾನಿಯ ಹಾಟ್ ಅವತಾರಕ್ಕೆ ಕತ್ತರಿ ಬಿದ್ದಿದೆ. ಚಿತ್ರದಲ್ಲಿ ಒಂಬತ್ತು ಸೆಕೆಂಡ್ನ ದೃಶ್ಯವನ್ನು ತೆಗೆಯುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅದಕ್ಕೆ ಕತ್ತರಿ ಹಾಕಿ ಮತ್ತೆ ಒಪ್ಪಿಸಲಾಗಿದೆ.
'ಏಕ್ ವಿಲನ್ ರಿಟರ್ನ್ಸ್' ಚಿತ್ರದಲ್ಲಿ ಅರ್ಜುನ್ ಕಪೂರ್, ಜಾನ್ ಅಬ್ರಾಹಂ, ದಿಶಾ ಪಟಾನಿ ನಟಿಸಿದ್ದು, ತೆರೆಗೆ ಬರುವುದಕ್ಕೆ ಚಿತ್ರ ಸಿದ್ದವಾಗಿದೆ. ದಿಶಾ ಪಟಾನಿ ಹಾಟ್ ಆಗಿ ಕಾಣಿಸಿಕೊಂಡಿರುವ ಕೆಲವು ದೃಶ್ಯಗಳು ಸೇರಿದಂತೆ ಕೆಲವೊಂದು ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಅಲ್ಲದೆ, ಅವಾಚ್ಯ ಶಬ್ದಗಳನ್ನು ತೆಗೆದು ಸೌಮ್ಯ ಶಬ್ದಗಳ ಬಳಕೆ ಮಾಡುವಂತೆ ಸೂಚಿಸಿತ್ತು. ಇಂಟಿಮೇಟ್ ದೃಶ್ಯಗಳನ್ನೂ ತೆಗೆಯುವಂತೆ ಸೂಚಿಸಲಾಗಿತ್ತು. ಹೀಗಾಗಿ ಇವೆಲ್ಲಾ ಸೇರಿ ಒಂಬತ್ತು ಸೆಕೆಂಡ್ಗಳ ದೃಶ್ಯಗಳನ್ನು ತೆಗೆದು ಹಾಕಲಾಗಿದೆ.
ಸದ್ಯ ಬದಲಾವಣೆಯೊಂದಿಗೆ ಒಪ್ಪಿಸಿರುವ ಚಿತ್ರಕ್ಕೆ 'ಯು/ಎ' ಸರ್ಟಿಫಿಕೇಟ್ ಸಿಕ್ಕಿದೆ. ಜುಲೈ 29ರಂದು 'ಏಕ್ ವಿಲನ್ ರಿಟರ್ನ್ಸ್’ ತೆರೆಗೆ ಬರಲಿದ್ದು, ಅಭಿಮಾನಿಗಳು ಚಿತ್ರ ನೋಡಲು ಕಾತರರಾಗಿದ್ದಾರೆ.