ಮಂಗಳೂರು, ಜು 18 (DaijiworldNews/HR): 2022ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡ ಉಡುಪಿ ಜಿಲ್ಲೆಯ ಇನ್ನಂಜೆ ಮೂಲದವರಾದ ಸಿನಿ ಶೆಟ್ಟಿ, ಮಿಸ್ ಇಂಡಿಯಾ ಆದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ತುಳುವಿನಲ್ಲೇ ಮಾತನಾಡಿದ ಅವರು, ನನ್ನನ್ನು ಪ್ರೋತ್ಸಾಹಿಸಿದ ಎಲ್ಲಾ ಕರಾವಳಿಯ ಜನತೆಗೆ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಮಿಸ್ ವಲ್ಡ್ ಕಿರೀಟವನ್ನು ಮುಡಿಗೇರಿಸುವ ಪ್ರಯತ್ನದಲ್ಲಿ ಇದ್ದೇನೆ ನಿಮ್ಮೇಲ್ಲರ ಸಹಕಾರ ಇದೇ ರೀತಿ ಇರಲಿ ಎಂದಿದ್ದಾರೆ.
ಇನ್ನು ಸಿನಿ ಶೆಟ್ಟಿ ತಮ್ಮ ಅಜ್ಜಿ ಮನೆಯಲ್ಲಿ ಕಳೆದ ನೆನಪುಗಳನ್ನು ಕೂಡ ಹಂಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಒಳ್ಳೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದರೆ ನಟಿಸುವುದಾಗಿಯೂ ತಿಳಿಸಿದ್ದಾರೆ.
21ರ ಹರೆಯದ ಸಿನಿ ಶೆಟ್ಟಿ ಮುಂಬೈನಲ್ಲಿ ಹುಟ್ಟಿ ಬೆಳೆದರೂ ಕೂಡಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ಅವರು ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ ಕೋರ್ಸ್ ವ್ಯಾಸಾಂಗ ಮಾಡುತ್ತಿದ್ದಾರೆ.