ಚೆನ್ನೈ,ಜು 09 (DaijiworldNews/MS):ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ರಾಜಕುಮಾರ’,'ಜೇಮ್ಸ್" ಚಿತ್ರದ ನಾಯಕಿ, ತಮಿಳು ನಟಿ ಪ್ರಿಯಾ ಆನಂದ್ ತಮ್ಮ ವಿಚಿತ್ರ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ.
ನಟಿ ಪ್ರಿಯಾ ಆನಂದ್ ಅವರು ಯೂಟ್ಯೂಬ್ ಚಾನೆಲ್ಗೆ ನೀಡಿದ ಹೇಳಿಕೆಯಿಂದ ಈ ಸುದ್ದಿಯಾಗಿದೆ. ಹೌದು ಸದ್ಯಕ್ಕೆ ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಮೇಲೆ ನಟಿಗೆ ಮೋಹವಿದೆಯಂತೆ. " ಒಂದು ವೇಳೆ ಪ್ರಿಯಾ ನಿತ್ಯಾನಂದನನ್ನು ಮದುವೆಯಾದರೆ ಸರ್ ನೇಮ್ ಬದಲಾಯಿಸುವ ಅಗತ್ಯವಿಲ್ಲ. ನಿತ್ಯಾನಂದರಿಗೆ ಜನರನ್ನು ಹೇಗೆ ಆಕರ್ಷಿಸಬೇಕು ಎಂದು ತಿಳಿದಿದೆ. ಸಾವಿರಾರು ಜನ ಅವರ ಹಿಂಬಾಲಕರಾಗಿದ್ದಾರೆ. ಅಷ್ಟು ಜನ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದರೆ ಅವರಲ್ಲಿ ಏನೋ ವಿಶೇಷತೆ ಇದೆ ಎಂದರ್ಥ ಅಲ್ಲವೇ " ಎಂದು ನಟಿ ಪ್ರಿಯಾ ಆನಂದ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಿಯಾ ತನ್ನ ಕುಶಾಗ್ರಮತ ಬುದ್ದಿಗೆ ಹಾಗೂ ಸೆಟ್ ನಲ್ಲಿ ವಿನೋದವಾಗಿರುವ ನಟಿ ಎಂದೇ ಖ್ಯಾತರಾಗಿದ್ದಾರೆ. ನಟಿ ಪ್ರಿಯಾ ಆನಂದ್ ಶಿವಕಾರ್ತಿಕೇಯನ್, ಅಥರ್ವ, ವಿಕ್ರಮ್ ಪ್ರಭು, ಗೌತಮ್ ಕಾರ್ತಿಕ್, ಪೃಥ್ವಿರಾಜ್, ಪುನೀತ್ ರಾಜ್ಕುಮಾರ್ ಮತ್ತು ಅಶೋಕ್ ಸೆಲ್ವನ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಟಾಪ್ ಹೀರೋಗಳೊಂದಿಗೆ ನಟಿಸಿದ್ದಾರೆ.