ಮುಂಬೈ, ಜೂ 25 (DaijiworldNews/DB): ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುವ ನಟಿ. ಸದಾ ಒಂದಿಲ್ಲೊಂದು ಕಾರಣಕ್ಕೆ ಅವರ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಇದೀಗ ನಾಯಿಯ ವಿಚಾರದಲ್ಲಿ ರಶ್ಮಿಕಾ ಸುದ್ದಿಯಾಗಿದ್ದಾರೆ.
ಶ್ವಾನದೊಂದಿಗೆ ರಶ್ಮಿಕಾಗೆ ಎಲ್ಲಿಲ್ಲದ ಪ್ರೀತಿ. ಆಗಾಗ ತಮ್ಮ ಮುದ್ದಿನ ನಾಯಿಮರಿಯನ್ನು ಮುದ್ದಿಸುತ್ತಿರುವ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನೆಮಾ ಬಿಡುಗಡೆಗೊಂಡ ಮೇಲಂತೂ ನಾಯಿಯೊಂದಿಗೆ ಭಾವನಾತ್ಮಕ ಒಡನಾಟ ಹೊಂದಿರುವ ರಶ್ಮಿಕಾ ಕದ್ದು ಮುಚ್ಚಿ ಸಿನೆಮಾ ನೋಡಿದ್ದಾರೆಂದೇ ಅಭಿಮಾನಿ ಬಳಗದಲ್ಲಿ ಸುದ್ದಿಗಳು ಹರಡಿದ್ದವು. ಇದೀಗ ಅವರ ಬಗ್ಗೆ ಇನ್ನೊಂದು ಲೇಟೆಸ್ಟ್ ಸುದ್ದಿ ಬಂದಿದೆ. ಅದೇನೆಂದರೆ ರಶ್ಮಿಕಾ ಶೂಟಿಂಗ್ಗಾಗಿ ಎಲ್ಲೇ ಹೋದರೂ ತಮ್ಮ ಮುದ್ದಿನ ನಾಯಿಯನ್ನು ಜೊತೆಗೇ ಕರೆದೊಯ್ಯುತ್ತಾರಂತೆ. ಅದಕ್ಕಾಗಿ ನಾಯಿಗೂ ಫ್ಲೈಟ್ ಟಿಕೆಟ್ ಮಾಡಿಸುವಂತೆ ನಿರ್ಮಾಪಕರಿಗೆ ದುಂಬಾಲು ಬೀಳುತ್ತಾರಂತೆ. ಹೀಗೊಂದು ಅಂತೆಕಂತೆ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ಇದರ ಕುರಿತು ರಶ್ಮಿಕಾ ಹೇಳೋದೇ ಬೇರೆ. ಈ ವಿಚಾರ ಕೇಳಿ ನನಗೆ ತುಂಬಾ ಫನ್ನಿ ಎನಿಸಿತು. ನಕ್ಕೂ ನಕ್ಕೂ ಸಾಕಾಯಿತು. ನನ್ನ ನಾಯಿ ಯಾವತ್ತೂ ನನ್ನೊಂದಿಗೆ ಬರಲು ಇಚ್ಚಿಸುವುದಿಲ್ಲ. ಮತ್ತು ಯಾವಾಗಲೂ ಹೈದರಾಬಾದ್ನ ಮನೆಯಲ್ಲೇ ಇರಲು ಇಷ್ಟ ಪಡುತ್ತದೆ. ಹೆಚ್ಚೇನೂ ಹೇಳಲಾರೆ ಎಂದು ಟ್ವೀಟ್ ಮೂಲಕ ತಮ್ಮ ಬಗ್ಗೆ ಹರಡಿರುವ ಅಂತೆಕಂತೆ ಸುದ್ದಿಗಳಿಗೆ ಪ್ರತಿಕ್ರಿಯಿಸಿದ್ದಾರೆ.