ಮುಂಬೈ, ಜೂ. 04 (DaijiworldNews/DB): 'ಪೃಥ್ವಿರಾಜ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿರುವ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಇದೀಗ ತಮ್ಮ ಮನದಾಸೆಯೊಂದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅದೆಂದರೆ ನಟ ರಾಮ್ ಚರಣ್ ತೇಜ ಅವರೊಂದಿಗೆ ಡೇಟಿಂಗ್ ಹೋಗುವುದು.
ಹೌದು ನಟಿ ಮಾನುಷಿ ಹೀಗೊಂದು ಬಯಕೆಯನ್ನು ವ್ಯಕ್ತಪಡಿಸಿರುವುದು ಮಾಧ್ಯಮ ಸಂದರ್ಶನದಲ್ಲಿ. ಯಾವ ನಟನೊಂದಿಗೆ ಸಿನೆಮಾ ಮಾಡಲು ಬಯಸುತ್ತೀರಾ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಮಾನುಷಿ ರಾಮ್ ಚರಣ್ ಹೆಸರೇಳಿದ್ದಾರೆ. ಯಾರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೀರಿ ಎಂದಾಗಲೂ ಅದೇ ಹೆಸರನ್ನು ಮಾನುಷಿ ಪುನರುಚ್ಚರಿಸಿದ್ದಾರೆ. ಆರ್ಆರ್ಆರ್ ಸಿನೆಮಾ ನೋಡಿದ ಮೇಲೆ ರಾಮ್ ಚರಣ್ ತೇಜ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದಿದ್ದಾರೆ 'ಪೃಥ್ವಿರಾಜ್' ಚಿತ್ರದ ಸುಂದರಿ.
ಸದ್ಯ ಅವರ ಹೇಳಿಕೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ಮುಂದೆ ಆಕೆ ರಾಮ್ ಚರಣ್ಗೆ ನಾಯಕಿಯಾಗಬಹುದೆ ಎಂದು ಅಭಿಮಾನಿಗಳು ಮತನಾಡುತ್ತಿದ್ದಾರೆ. ಅವರ ಚೊಚ್ಚಲ ಸಿನಿಮಾ ಜೂನ್ 3ಕ್ಕೆ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಮಾನುಷಿ ಚಿಲ್ಲರ್ ನಟಿಸಿದ್ದಾರೆ.