ಬೆಂಗಳೂರು, ಮೇ 18 (DaijiworldNews/DB): ಯುವ ನಟಿ ಚೇತನಾ ರಾಜ್ ಸಾವಿನ ಬೆನ್ನಲ್ಲೇ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಚಿತ್ರರಂಗದಲ್ಲಿರುವ ಮಹಿಳೆಯರಿಗೆ ಮಾತ್ರ ಇರುವ ಬ್ಯೂಟಿ ಸ್ಟಾಂಡರ್ಡ್ ನೀತಿಗಳ ಬಗ್ಗೆ ಟ್ವಿಟರ್ನಲ್ಲಿ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ನಟಿಯರ ಮೇಲೆ ಸೌಂದರ್ಯದ ಕುರಿತು ಚಿತ್ರರಂಗದಲ್ಲಿ ತೀವ್ರ ಒತ್ತಡ ಹೇರಲಾಗುತ್ತಿದೆ ಎಂದವರು ಬರೆದುಕೊಂಡಿದ್ದಾರೆ.
ಫ್ಯಾಟ್ ಸರ್ಜರಿಗೊಳಗಾಗಿ ನಿನ್ನೆಯಷ್ಟೇ 22 ವರ್ಷದ ನಟಿ ಚೇತನಾರಾಜ್ ಜೀವ ಕಳೆದುಕೊಂಡಿದ್ದಾರೆ. ದೊಡ್ಡ ನಟಿಯಾಗಬೇಕೆಂಬ ಕನಸಿನೊಂದಿಗೆ ಕಿರು ಪರದೆಗೆ ಬಂದ ಅವರು ತಮ್ಮ ಕನಸು ನನಸಾಗುವ ಮುನ್ನವೇ ಜೀವನದ ಪಯಣ ಮುಗಿಸಿದ್ದಾರೆ. ಈ ಘಟನೆ ಈಗಾಗಲೇ ಚಿತ್ರರಂಗದಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದೇ ವೇಳೆ ಮಹಿಳೆಯರಿಗೆ ಮಾತ್ರ ಸೌಂದರ್ಯ ಕಾಪಾಡಲು ಹೇರಲಾಗುವ ಒತ್ತಡದ ಕುರಿತು ನಟಿ, ಮಾಜಿ ಸಂಸದೆ ರಮ್ಯಾ ಬರೆದುಕೊಂಡಿದ್ದಾರೆ. ಚಿತ್ರರಂಗದಿಂದ ಸದ್ಯ ದೂರ ಇದ್ದರೂ, ಅಲ್ಲಿನ ಆಗುಹೋಗುಗಳನ್ನು ಸೂಕ್ಷ್ಮವಾಗಿಯೇ ತಿಳಿಸಿಕೊಟ್ಟಿದ್ದಾರೆ.
ಚಿತ್ರರಂಗದಲ್ಲಿ ಮಹಿಳೆಯರ ಬ್ಯೂಟಿ ಸ್ಟಾಂಡರ್ಡ್ ತುಂಬಾನೇ ಇದೆ. ಎಷ್ಟೆಂದರೆ ಸೌಂದರ್ಯ ಕಾಪಾಡಿಕೊಳ್ಳಲು ಅವರ ಮೇಲೆ ತೀರಾ ಒತ್ತಡ ಹೇರಲಾಗುತ್ತದೆ. ಕಳೆದ ಐದು ವರ್ಷಗಳ ಹಿಂದೆ ಕಾಲಿನ ಟ್ಯೂಮರ್ ರಿಮೂವಲ್ ನಂತರ ನಾನು ಸಾಕಷ್ಟು ದಪ್ಪಗೆ ಆದೆ. ತೂಕದ ಸಮಸ್ಯೆಯಿಂದ ಸಾಕಷ್ಟು ತೊಂದರೆಗೂ ಒಳಗಾಗಿದ್ದೇನೆ. ಬಳಿಕ ನನ್ನದೇ ಮಾರ್ಗದಲ್ಲಿ ತೂಕ ಇಳಿಸಿಕೊಂಡೆ. ಶೀಘ್ರ ಪರಿಹಾರಗಳಿಗೆ ಸುಲಭವಾಗಿ ಆಕರ್ಷಿತರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಮಹಿಳೆಯರಿಗೆ ಹೇರಲಾಗುವ ಈ ಬ್ಯೂಟಿ ಸ್ಟಾಂಡರ್ಡ್ ಪುರುಷರಿಗೆ ಅನ್ವಯ ಆಗುವುದಿಲ್ಲ (ಯಾರಿಗೂ ಅನ್ವಯ ಆಗಬಾರದು ಎಂಬುದು ನನ್ನ ಕಳಕಳಿ). ಪುರುಷರಲ್ಲಿ ಡೊಳ್ಳು ಹೊಟ್ಟೆಯವರು, ವಿಗ್ ಹಾಕಿಕೊಂಡವರನ್ನು,65 ವರ್ಷ ಮೇಲ್ಪಟ್ಟವರನ್ನೂ ಹೀರೋ ಎಂದೇ ಪರಿಗಣಿಸಲಾಗುತ್ತದೆ. ಆದರೆ ಮಹಿಳೆಯ ತೂಕ ಸ್ವಲ್ಪ ಹೆಚ್ಚಿದರೂ ಆಕೆಯನ್ನು ಆಂಟಿ, ಅಜ್ಜಿ ಎಂದೆಲ್ಲಾ ಟ್ರೋಲ್ ಮಾಡಲಾಗುತ್ತದೆ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ. ಜಗತ್ತು ನಾವು ಹೇಗಿರಬೇಕು ಎಂಬುದನ್ನು ನಿರ್ಧರಿಸುವುದು ಬೇಡ. ಚಿತ್ರರಂಗಕ್ಕಿದು ಬದಲಾಗಬೇಕಾದ ಕಾಲ. ಸಂಭಾವನೆಯಲ್ಲೂ ತಾರತಮ್ಯ, ಬ್ಯೂಟಿ ಸ್ಟಾಂಡರ್ಡ್ ಹೇರಿಕೆ, ಪಾತ್ರಗಳ ತಾರತಮ್ಯದ ವಿರುದ್ದ ಚಿತ್ರರಂಗದವರೆಲ್ಲರೂ ಒಟ್ಟಾಗಿ ಹೋರಾಡಬೇಕಿದೆ ಎಂದಿದ್ದಾರೆ.