ಹೈದರಾಬಾದ್, ಮೇ 11 (DaijiworldNews/DB): ರಕ್ಷಿತ್ ಶೆಟ್ಟಿ ಜೊತೆ ಸಂಬಂಧ ಮುರಿದು ಬಿದ್ದ ಬಳಿಕ ರಶ್ಮಿಕಾ ಮಂದಣ್ಣ ಹೆಸರು ಟಾಲಿವುಡ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಜೊತೆಗೆ ಆಗಾಗ ತಳುಕು ಹಾಕಿಕೊಳ್ಳುತ್ತಲೇ ಇತ್ತು. ಇವರಿಬ್ಬರು ರಿಲೇಶನ್ಶಿಪ್ನಲ್ಲಿದ್ದಾರೆ ಎಂಬುದಾಗಿಯೇ ಎಂದೇ ಹೇಳಲಾಗುತ್ತಿದೆ. ಆದರೆ, ಅದೇ ರಶ್ಮಿಕಾ-ವಿಜಯ್ ನಡುವೆ ಬ್ರೇಕಪ್ ಆಗಿದೆಯೇ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
ರಶ್ಮಿಕಾ-ವಿಜಯ್ ಮಧ್ಯೆ ಬ್ರೇಕಪ್ ಸುದ್ದಿ ಹರಿದಾಡಲು ಕಾರಣವೂ ಇದೆ. ನಿನ್ನೆಯಷ್ಟೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಟಾಲಿವುಡ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಅವರಿಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿಶ್ ಮಾಡದೇ ಇರುವುದು ಸದ್ಯ ಅಭಿಮಾನಿಗಳಲ್ಲಿ ಗುಸುಗುಸು ಮಾತಿಗೆ ಕಾರಣವಾಗಿದೆ. ವಿಜಯ್ ಮತ್ತು ರಶ್ಮಿಕಾ ನಡುವೆ ಬ್ರೇಕಪ್ ಆಗಿದೆಯೇ? ಅದಕ್ಕಾಗಿಯೇ ವಿಜಯ್ ಹುಟ್ಟುಹಬ್ಬಕ್ಕೆ ಚರಿಷ್ಮಾ ಸುಂದರಿ ವಿಶ್ ಮಾಡಿಲ್ಲವೇ ಎಂಬ ಮಾತುಗಳು ಅಭಿಮಾನಿಗಳ ಅಂಗಳದಿಂದ ಹರಿದಾಡುತ್ತಿದೆ.
ಆಗಾಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ತಾವಿಬ್ಬರು ಆತ್ಮೀಯರು ಎಂಬ ಸಂದೇಶ ರವಾನಿಸುತ್ತಲೇ ಇದ್ದರು. ಹೊಟೇಲ್, ಪ್ರವಾಸಿ ತಾಣಗಳಲ್ಲಿ ಜೊತೆಯಾಗಿರುವ ಪೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿದ್ದರು. ಇದಲ್ಲದೆ ವಿಜಯ್ ಮನೆಯಲ್ಲೇ ಈ ವರ್ಷದ ಸಂಕ್ರಾಂತಿಯನ್ನು ರಶ್ಮಿಕಾ ಆಚರಿಸಿದ್ದರು. ಹೊಸ ವರ್ಷಕ್ಕೆ ವಿಜಯ್ ಕುಟುಂಬದ ಜೊತೆ ಗೋವಾದಲ್ಲಿ ಕಾಣಿಸಿಕೊಂಡಿದ್ದರು. ವಿಜಯ್ಗೂ, ಅವರ ಕುಟುಂಬಕ್ಕೂ ಇಷ್ಟೆಲ್ಲ ಆತ್ಮೀಯರಾಗಿರುವ ರಶ್ಮಿಕಾ ಮಂದಣ್ಣ, ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿಜಯ್ ದೇವರಕೊಂಡಗೆ ವಿಶ್ ಮಾಡದೇ ಇರುವುದು ಇವರಿಬ್ಬರ ನಡುವೆ ಏನೋ ವೈಮನಸ್ಯ ಉಂಟಾಗಿದೆ ಎಂಬ ಸುದ್ದಿ ಹರಿದಾಡಲು ಕಾರಣವಾಗಿದೆ. ಸುದ್ದಿಗಳಿಗೆ ತೆರೆ ಎಳೆಯಬೇಕಾದರೆ ಸ್ವತಃ ರಶ್ಮಿಕಾ ಅವರೇ ಸ್ಪಷ್ಟನೆ ನೀಡಬೇಕಷ್ಟೇ.