ಮುಂಬೈ, ಏ 24 (DaijiworldNews/DB): ಇತ್ತೀಚೆಗಷ್ಟೇ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ನ ಕ್ಯೂಟ್ ಜೋಡಿ ರಣಬೀರ್ ಕಪೂರ್-ಆಲಿಯಾ ಭಟ್ ದಂಪತಿ ಈಗ ದಾಂಪತ್ಯದ ಸುಖವನ್ನು ಅನುಭವಿಸುತ್ತಿದ್ದಾರೆ. ಸದ್ಯ ಮದುವೆಯಾದ ಹೊಸದರಲ್ಲಿ ಜೋಡಿ ಚಿತ್ರರಂಗದಿಂದ ಸ್ವಲ್ಪ ಬಿಡುವು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಜೋಡಿಯ ಕುರಿತಾಗಿ ಮಹತ್ವದ ಮಾಹಿತಿಯೊಂದು ಹೊರ ಬಿದ್ದಿದೆ. ಅದೆಂದರೆ ’ಆ’ ಒಂದು ವಾಟ್ಸಾಪ್ ಗ್ರೂಪ್ಗೆ ಆಲಿಯಾ-ರಣಬೀರ್ಗೆ ಪ್ರವೇಶ ನಿಷೇಧವಂತೆ!
ಹೌದು. ಆ ಒಂದು ವಾಟ್ಸಾಪ್ ಗ್ರೂಪ್ಗೆ ತಮ್ಮನ್ನು ಸೇರಿಸಬೇಕೆಂದು ಆಲಿಯಾ ಮತ್ತು ರಣಬೀರ್ ಇಬ್ಬರೂ ಗ್ರೂಪ್ ಅಡ್ಮಿನ್ರಲ್ಲಿ ಹೇಳಿದ್ದರಂತೆ. ಆದರೆ ಇಬ್ಬರನ್ನೂ ಸೇರಿಸಲು ಅಡ್ಮಿನ್ ನಿರಾಕರಿಸಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಕರಣ್ ಜೋಹರ್ ಅವರು ಸೋಶಿಯಲ್ ಮೀಡಿಯಾ ಸ್ಟಾರ್ ಜಾನಿಸ್ ಶೋ ನಲ್ಲಿ ಭಾಗಿಯಾಗಿದ್ದ ವೇಳೆ ಹೇಳಿಕೊಂಡಿದ್ದಾರೆ. ಶೋನಲ್ಲಿ ಬಾಲಿವುಡ್ ತಾರೆಯರೇ ಇರದ ವಾಟ್ಸಾಪ್ ಗ್ರೂಪ್ ಬಗ್ಗೆ ಹೇಳಿ ಎಂಬುದಾಗಿ ಕೇಳಿದ ಪ್ರಶ್ನೆಗೆ ಅವರು, ಆಲಿಯಾ ಮತ್ತು ರಣಬೀರ್ ಇಲ್ಲದಿರುವ ಗ್ರೂಪ್ ಬಗ್ಗೆ ಹೇಳಿದ್ದಾರೆ. ’ಎ’ ಲಿಸ್ಟ್ ಎಂಬುದಾಗಿ ಒಂದು ಗ್ರೂಪ್ ಇದ್ದು, ಅದರಲ್ಲಿ ಚಿತ್ರರಂಗಕ್ಕೆ ಸಂಬಂಧಪಟ್ಟವರೆಲ್ಲರೂ ಸದಸ್ಯರಾಗಿದ್ದಾರೆ.
ಚಿತ್ರಗಳ ಕುರಿತು ಚರ್ಚೆಗಳು ಅದರಲ್ಲಿ ನಡೆಯುತ್ತಿರುತ್ತವೆ. ಇದಕ್ಕಾಗಿ ರಣಬೀರ್ ಮತ್ತು ಆಲಿಯಾ ಕೂಡಾ ಆ ಗ್ರೂಪ್ಗೆ ಸೇರಲು ಬಯಸಿದ್ದರು. ಆದರೆ ಚಿತ್ರಗಳ ಕುರಿತು ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ವಿಮರ್ಶೆಗಳು ಆ ಗ್ರೂಪ್ನಲ್ಲಿ ನಡೆಯುವುದರಿಂದ ಅದಕ್ಕೆ ಈ ಸ್ಟಾರ್ ದಂಪತಿಯನ್ನು ಸೇರಿಸುವುದು ಬೇಡ ಎಂಬುದಾಗಿ ನಿರ್ದೇಶಕ ಅಯಾನ್ ಮುಖರ್ಜಿ ಹೇಳಿದ್ದರು. ಅದಕ್ಕಾಗಿಯೇ ಇಬ್ಬರಿಗೂ ಗ್ರೂಪ್ ಸೇರ್ಪಡೆ ನಿರ್ಷೇಧವಾಗಿದೆ.