ಮುಂಬೈ, ಏ 22 (DaijiworldNews/DB): ಬಾಲಿವುಡ್-ಕ್ರಿಕೆಟ್ ತಾರೆಯರ ನಡುವೆ ಪ್ರೇಮಾಂಕುರ, ಮದುವೆ ಇದೆಲ್ಲ ಹೊಸದೇನಲ್ಲ. ಸದ್ಯ ಇದೇ ಕಾರಣಕ್ಕೆ ಸುದ್ದಿಯಲ್ಲಿರುವವರು ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ಬೆಡಗಿ ಅಥಿಯಾ ಶೆಟ್ಟಿ ಮದುವೆ ವಿಚಾರ. ಒಂದು ಮೂಲಗಳ ಪ್ರಕಾರ ಈ ವರ್ಷಾಂತ್ಯಕ್ಕೆ ಜೋಡಿ ಹಸೆಮಣೆ ಏರಲಿದ್ದಾರಂತೆ.
ರಾಹುಲ್ ಮತ್ತು ಅಥಿಯಾ ನಡುವಿನ ಪ್ರೀತಿ ಹಳೆಯ ವಿಚಾರವೇ ಆಗಿದೆ. ಆಗಾಗ ಜೊತೆಗೇ ಸುತ್ತಾಡುವುದು, ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದು ನಡೆದೇ ಇದೆ. ಆದರೆ ಎಲ್ಲಿಯೂ ಈ ಜೋಡಿ ತಾವಿಬ್ಬರು ಪ್ರೀತಿಸುತ್ತಿದ್ದೇವೆ ಎಂದು ಬಾಯ್ಬಿಟ್ಟಿಲ್ಲ, ಹಾಗಂತ ಎದ್ದಿರುವ ಊಹಾಪೋಹಗಳಿಗೂ ಸ್ಪಷ್ಟನೆ ನೀಡಿಲ್ಲ. ಇವರಿಬ್ಬರ ರಿಲೇಶನ್ಶಿಪ್ಗೆ ಇಂಬು ಕೊಡುವಂತೆ ಇತ್ತೀಚೆಗೆ ರಾಹುಲ್ ಹುಟ್ಟುಹಬ್ಬಕ್ಕೆ ಅಥಿಯಾ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದರು.
ಇನ್ನು ರಾಹುಲ್ ಮೂಲತಃ ಮಂಗಳೂರಿನವರು. ಅಥಿಯಾ ತಂದೆ, ನಟ ಸುನಿಲ್ ಶೆಟ್ಟಿ ಕೂಡಾ ಮಂಗಳೂರಿನವರೇ. ಹಾಗಾಗಿ ಇಬ್ಬರ ಪ್ರೀತಿಗೆ ಸುನಿಲ್ ಶೆಟ್ಟಿ ಎಂದೋ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ರಾಹುಲ್ ಮನೆಯಲ್ಲಿಯೂ ಈ ಪ್ರೀತಿಗೆ ಜೈ ಹೇಳಿದ್ದಾರೆ ಎನ್ನಲಾಗಿದೆ. ಹಾಗಾಗಿ ಇಬ್ಬರಿಗೂ ಡಿಸೆಂಬರ್ ವೇಳೆಗೆ ಮದುವೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಕೆಲವು ವರದಿಗಳು ಇದನ್ನು ನಿರಾಕರಿಸಿವೆ. ಅಥಿಯಾ ಕೈಯಲ್ಲಿ ಎರಡು ಸಿನೆಮಾಗಳಿದ್ದು, ಈ ವರ್ಷಾಂತ್ಯಕ್ಕೆ ಅವರು ಸಿನೆಮಾಗಳಲ್ಲಿ ಬ್ಯುಸಿ ಇದ್ದರೆ, ಇತ್ತ ರಾಹುಲ್ ವಿಶ್ವಕಪ್ಗೆ ತಯಾರಿ ನಡೆಸುತ್ತಿದ್ದಾರೆ. ಈ ಕಾರಣದಿಂದ ಇಬ್ಬರಿಗೂ ಮದುವೆಗೆ ಸಮಯ ಹೊಂದಾಣಿಕೆ ಆಗುವುದಿಲ್ಲ. ಹಾಗಾಗಿ ಮದುವೆ ಸದ್ಯಕ್ಕಿಲ್ಲ ಎಂಬುದಾಗಿಯೂ ಹೇಳಲಾಗುತ್ತಿದೆ. ಅದೇನೇ ಇರಲಿ ಮದುವೆ ವಿಚಾರವನ್ನು ಅಥಿಯಾ-ರಾಹುಲ್ ಜೋಡಿಯೇ ಸ್ಪಷ್ಟಪಡಿಸಬೇಕಷ್ಟೇ.