ನವದೆಹಲಿ, ಏ 16 (DaijiworldNews/DB): ನನ್ನ ಆಸೆ, ಆಕಾಂಕ್ಷೆ, ಆತಂಕ ಮತ್ತು ರೀತಿನೀತಿಗಳನ್ನು ಮಗುವಿನ ಮೇಲೆ ಹಾಕುವುದಿಲ್ಲ. ಮಗು ಅದರದೇ ಪ್ರಪಂಚದಲ್ಲಿ ಖುಷಿಯಾಗಿ ಬೆಳೆಯಬೇಕು ಎಂದು ನಟಿ ಪ್ರಿಯಾಂಕಾ ಛೋಪ್ರಾ ತನ್ನ ಮಗುವಿನ ಬಗೆಗೆ ತನಗಿರುವ ವಿಶೇಷ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಪುಸ್ತಕ ಬಿಡುಗಡೆ ವೇಳೆ ಲಿಲ್ಲಿ ಸಿಂಗ್ ಅವರೊಂದಿಗೆ ಸಂವಾದ ನಡೆಸಿರುವ ಪ್ರಿಯಾಂಕಾ ಚೋಪ್ರಾ, ಮಗುವನ್ನು ನೋಡಿಕೊಳ್ಳಲು ನಿರ್ಧರಿಸಿರುವ ಬಗೆಯನ್ನು ಹಂಚಿಕೊಂಡಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಂಡಿರುವ ಪ್ರಿಯಾಂಕಾ-ನಿಕ್ ದಂಪತಿ ಇದುವರೆಗೆ ಮಗು ಹೆಣ್ಣೋ, ಗಂಡೋ ಎಂಬುದಾಗಲೀ, ಮಗುವಿನ ಫೋಟೋವನ್ನಾಗಲೀ ಬಹಿರಂಗಪಡಿಸಿಲ್ಲ. ಆದರೆ, ಮಗುವಿನ ಬಗೆಗಿನ ತನ್ನ ಕಾಳಜಿಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಮಗುವಿನ ಬೆಳವಣಿಗೆ ಸಂಬಂಧಿಸಿದಂತೆ ನಾನು ಯಾವತ್ತೂ ನನ್ನ ನಿರ್ಧಾರಗಳನ್ನು ಹೇರಿಕೆ ಮಾಡುವುದಿಲ್ಲ. ಮಕ್ಕಳು ಅವರದೇ ಪ್ರಪಂಚದಲ್ಲಿ ಬೆಳೆಯಲು, ಆ ಮೂಲಕ ಜೀವನ ಕಟ್ಟಿಕೊಳ್ಳಲು ಬಯಸುತ್ತಾರೆ. ಅವರ ಆ ಆಸೆಗೆ ನಮ್ಮ ಹೇರಿಕೆಯನ್ನು ಸೇರಿಸಿದರೆ ಅದರಿಂದ ಅವರ ಜೀವನಕ್ಕೆ ತೊಂದರೆಯಾಗುತ್ತದೆ ಎನ್ನುತ್ತಾರೆ ಪ್ರಿಯಾಂಕ. ನನ್ನ ಆಸೆ, ಆಕಾಂಕ್ಷೆ, ಆತಂಕ, ಜೀವನದ ರೀತಿನೀತಿಗಳನ್ನು ಮಗುವಿನ ಮೇಲೆ ನಾನ್ಯಾವತ್ತೂ ಹೇರುವುದಿಲ್ಲ. ನಮ್ಮಿಂದಲೇ ಮಗು ಬೆಳೆಯುತ್ತದೆ ಎಂಬುದು ತಪ್ಪು ಕಲ್ಪನೆ, ನಮ್ಮ ಮೂಲಕ ಅದು ಬೆಳೆಯುತ್ತದಷ್ಟೇ ಎಂದಿದ್ದಾರೆ ನಟಿ ಪ್ರಿಯಾಂಕ.
ಅಂದಹಾಗೆ ಪ್ರಿಯಾಂಕಾ ಹೆತ್ತವರು ಕೂಡಾ ಆಕೆಯ ಬೆಳವಣಿಗೆ ವಿಷಯದಲ್ಲಿ ಯಾವುದೇ ತೀರ್ಪು, ನಿರ್ಧಾರಗಳನ್ನು ಕೊಡುತ್ತಿರಲಿಲ್ಲವಂತೆ ಮತ್ತು ಇದೇ ಅವರ ಉನ್ನತಿಗೆ ಸಹಕಾರಿಯಾಯಿತು ಎನ್ನುತ್ತಾರವರು.
ಬಾಲಿವುಡ್ ನಲ್ಲಿ ಮಿಂಚಿ ತನ್ನ ಪ್ರತಿಭೆಯನ್ನು ಹಾಲಿವುಡ್ ವರೆಗೆ ಕೊಂಡೊಯ್ದು ನಂತರ ಪಾಪ್ ಗಾಯಕ ನಿಕ್ ಜೊನಸ್ ವಿವಾಹವಾಗಿ ನ್ಯೂಯಾರ್ಕ್ ನಲ್ಲಿ ವಾಸ್ತವ್ಯ ಹೊಂದಿರುವ ನಟಿ ಪ್ರಿಯಾಂಕಾ ಚೋಪ್ರ ಇತ್ತೀಚೆಗೆ ಬಾಡಿಗೆ ತಾಯ್ತನ ಮೂಲಕ ಮಗುವನ್ನು ಪಡೆದಿದ್ದರು.