ಮುಂಬೈ, ಏ 12 (DaijiworldNews/DB): ಈಗಂತೂ ಬಾಲಿವುಡ್ ತಾರಾ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯದ್ದೇ ಸುದ್ದಿ. ಈ ನಡುವೆ ಮದುವೆಗೂ ಮುನ್ನವೇ ನಟ ಸಂಜಯ್ ದತ್ ಅವರು ಭಾವೀ ದಂಪತಿಗೆ ವಿಶೇಷವಾಗಿಯೇ ಹಾರೈಸಿದ್ದಾರೆ. ಆದಷ್ಟು ಬೇಗ ಮಕ್ಕಳನ್ನು ಪಡೆದು ಖುಷಿಯಾಗಿರಿ ಎಂಬುದೇ ಆ ಹಾರೈಕೆ.
ಸಂಜಯ್ ದತ್ ಸದ್ಯ 'ಕೆಜಿಎಫ್ ಚಾಪ್ಟರ್ 2' ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಣಬೀರ್-ಆಲಿಯಾ ಮದುವೆ ದಿನಾಂಕ ಇನ್ನೂ ಹೊರ ಬಿದ್ದಿಲ್ಲ. ಮೂಲಗಳ ಪ್ರಕಾರ ಏಪ್ರಿಲ್ 20ರ ಒಳಗೆ ಮದುವೆ ನಡೆಯಲಿದೆ. ಈ ನಡುವೆ ಏಪ್ರಿಲ್ 14ರಂದೇ ಮದುವೆ ನಡೆಯಲಿದೆ ಎಂದೂ ಗುಸು ಗುಸು ಇದೆ. ಅಂದು 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಿಡುಗಡೆಯೂ ಇದೆ. ಈ ಬಗ್ಗೆ ಸಂಜಯ್ ದತ್ ಅವರಿಗೆ ಸುದ್ದಿಸಂಸ್ಥೆಯೊಂದು ಪ್ರಶ್ನೆ ಹಾಕಿದಾಗ, ಮದುವೆ ಯಾವಾಗ ಎಂಬುದು ತಿಳಿದಿಲ್ಲ.
ಒಂದು ವೇಳೆ ಚಿತ್ರ ಬಿಡುಗಡೆ ದಿನದಂದೇ ಅವರ ಮದುವೆ ನಡೆದರೂ ಖುಷಿಯೇ. ರಣಬೀರ್ ನನ್ನೊಂದಿಗೆ ನಟಿಸಿದ್ದಾರೆ. ಆಲಿಯೋ ಕಣ್ಣೆದುರೇ ಹುಟ್ಟಿ ಬೆಳೆದ ಹುಡುಗಿ. ಅವರ ಜೀವನ ಖುಷಿಯಿಂದ ಸಾಗಬೇಕು. ಶೀಘ್ರ ಅವರು ಮಕ್ಕಳನ್ನು ಪಡೆದು ಖುಷಿಯಾಗಿರಲಿ ಎಂದು ಹಾರೈಸಿದ್ದಾರೆ.
ದಾಂಪತ್ಯ ಜೀವನ ಎಂದ ಮೇಲೆ ಹೊಂದಾಣಿಕೆ ಮುಖ್ಯ. ಏನಾದರೂ ಗೊಂದಲಗಳಾದರೆ ನಾನು, ನಾನು ಎಂದು ಒಣಪ್ರತಿಷ್ಠೆಗಿಳಿಯದೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಒಪ್ಪಂದ, ಜವಾಬ್ದಾರಿ ದಂಪತಿಗಳ ನಡುವೆ ಅತೀ ಅಗತ್ಯ ಎಂದು ಇದೇ ವೇಳೆ ಭಾವೀ ದಂಪತಿಗಳಿಗೆ ಸಲಹೆ ನೀಡಿದ್ದಾರೆ.