ಮುಂಬೈ, ಏ 10 (DaijiworldNews/DB): ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಆರತಕ್ಷತೆ ಸದ್ಯದಲ್ಲೇ ಐಷಾರಾಮಿ ಹೊಟೇಲ್ನಲ್ಲಿ ನೆರವೇರಲಿದ್ದು, ಚಿತ್ರರಂಗದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಅಂದಹಾಗೆ, ರಣಬೀರ್ ಮಾಜಿ ಪ್ರೇಯಸಿಯರಾದ ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್ ಅವರೂ ಆರತಕ್ಷತೆಗೆ ಆಗಮಿಸಲಿದ್ದಾರಂತೆ.
ಹೌದು. ಹೀಗೊಂದು ಟಾಪ್ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹಾರಾಡುತ್ತಿದೆ. ಬಾಲಿವುಡ್ ತಾರೆಗಳಾದ ರಣಬೀರ್-ಆಲಿಯಾ ಹಲವು ಸಮಯಗಳಿಂದ ಪ್ರೀತಿಸುತ್ತಿದ್ದು, ಅವರ ಪ್ರೀತಿಯ ಪಯಣ ಇದೀಗ ಮದುವೆಯ ಹಂತಕ್ಕೆ ಬಂದು ನಿಂತಿದೆ. ಚಿತ್ರರಂಗದಲ್ಲಿ ಒಂದರ ಮೇಲೊಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜೋಡಿ ಸಪ್ತಪದಿ ತುಳಿಯುವುದಕ್ಕೆ ಬಿಡುವು ಮಾಡಿಕೊಂಡಿದ್ದಾರೆ. ರಣಬೀರ್ ಅವರ ಮಾಜಿ ಪ್ರೇಯಸಿಯರಾದ ದೀಪಿಕಾ, ಕತ್ರಿನಾ ಈ ಮದುವೆಗೆ ಸಾಕ್ಷಿಯಾಗುವುದು ಪಕ್ಕಾ ಆಗಿದೆ ಎನ್ನಲಾಗುತ್ತಿದೆ.
ರಣಬೀರ್ ಕಪೂರ್-ದೀಪಿಕಾ ಪಡುಕೋಣೆ ಒಂದು ಕಾಲದಲ್ಲಿ ಜೋಡಿ ಹಕ್ಕಿಗಳಾಗಿದ್ದರು. ಆದರೆ ಬ್ರೇಕಪ್ ಮೂಲಕ ಸಂಬಂಧ ಸ್ವಲ್ಪ ಸಮಯದಲ್ಲೇ ದೂರವಾಗಿತ್ತು. ಆ ಬಳಿಕ ರಣಬೀರ್ ಕತ್ರಿನಾ ಕೈಫ್ ಅವರೊಂದಿಗೆ ಪ್ರೀತಿಯಲ್ಲಿ ಮುಳಿಗಿದ್ದರು. ಅವರಿಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಈ ಸಂಬಂಧವೂ ಬ್ರೇಕಪ್ನಲ್ಲಿ ಅಂತ್ಯವಾಗಿತ್ತು. ಪ್ರಸ್ತುತ ಆಲಿಯಾ ಭಟ್ ಜೊತೆಗಿನ ರಣಬೀರ್ ಪ್ರೀತಿ ವಿವಾಹದ ಹಂತ ತಲುಪಿದೆ. ಸದ್ಯ ಅವರ ಇಬ್ಬರು ಮಾಜಿ ಪ್ರೇಯಸಿಯರಿಗೂ ಮದುವೆಯಾಗಿರುವುದರಿಂದ ಹಳೆಯದೆಲ್ಲವನ್ನು ಮರೆತು ಮದುವೆ ಆರತಕ್ಷತೆಗೆ ಹಾಜರಾಗಲು ನಿರ್ಧರಿಸಿದ್ದಾರಂತೆ. ಇಬ್ಬರನ್ನೂ ರಣಬೀರ್ ಆರತಕ್ಷತೆಗೆ ಆಮಂತ್ರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಕತ್ರಿನಾ, ದೀಪಿಕಾ ಮದುವೆ ಆರತಕ್ಷತೆಗೆ ಬರುವುದು ಬಹುತೇಕ ಖಚಿತವಾಗಿದೆ.