ಮುಂಬೈ, ಏ 04 (DaijiworldNews/DB): ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರ ನಡುವಿನ ಸಂಬಂದ ಹೊಸದೇನಲ್ಲ. ಈ ಸಾಲಿನಲ್ಲಿ ಸದ್ಯ ಸುದ್ದಿಯಾಗುತ್ತಿರುವುದು ಭಾರತ ಕ್ರಿಕೆಟ್ ತಂಡದ ನಾಯಕ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಅವರ ಲವ್ ಸ್ಟೋರಿ. ಅಂದ ಹಾಗೆ ಭಾವೀ ಅಳಿಯನಿಗೆ ಭಾವೀ ಮಾವ ಫಿಟ್ ನೆಸ್ ಕಾಯ್ದುಕೊಳ್ಳುವುದಕ್ಕೆ ಯಾವಾಗಲು ಸಲಹೆ ಕೊಡುತ್ತಿದ್ದಾರಂತೆ.
ಹೌದು ಈ ಬಗ್ಗೆ ಕೆ.ಎಲ್. ರಾಹುಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ರಾಹುಲ್ ಭಾವೀ ಮಾವ, ನಟ ಸುನಿಲ್ ಶೆಟ್ಟಿ ಅವರಿಗೀಗ 60ರ ಪ್ರಾಯ. ಆದರೆ ಫಿಟ್ ನೆಸ್ ವಿಚಾರಕ್ಕೆ ಬಂದಾಗ ಅವರು ಯುವಕರನ್ನೂ ನಾಚಿಸುವಂತಿದ್ದಾರೆ. ಅದಕ್ಕಾಗಿಯೇ ಅಳಿಯನಾಗಲಿರುವ ಕೆ.ಎಲ್. ರಾಹುಲ್ ಗೂ ಫಿಟ್ ನೆಸ್ ಪಾಠ ಮಾಡುತ್ತಾರಂತೆ. ಫಿಟ್ ನೆಸ್ ಬಗ್ಗೆ ಗಮನ ಹರಿಸಬೇಕು. ನೀನು ಕೇವಲ ಫಿಟ್ ಆಗಿದ್ದರೆ ಸಾಲದು. ಆರೋಗ್ಯ ಅವಶ್ಯವಾಗಿದೆ. ಅಗತ್ಯವಾಗಿರುವುದನ್ನು ಮಾತ್ರ ತಿನ್ನಬೇಕು ಎಂದು ಸಲಹೆ ಮಾಡುತ್ತಾರೆ ಎನ್ನುತ್ತಾರೆ ರಾಹುಲ್. ಅವರಿಗೆ ವಯಸ್ಸಾದರೂ ಫಿಟ್ ಆಗಿದ್ದಾರೆ, ಯುವಕರಂತೆ ವರ್ಕೌಟ್ ಮಾಡುತ್ತಾರೆ. ಅವರಿಗೆ ಅದು ಸಾಧ್ಯವಾದರೆ ನನಗೆ ಯಾಕೆ ಆಗಲ್ಲ ಎಂಬುದಾಗಿ ಯೋಚಿಸುತ್ತೇನೆ ಎನ್ನುತ್ತಾರೆ ರಾಹುಲ್.
ಕ್ರಿಕೆಟ್ ಬಗ್ಗೆ ಸುನಿಲ್ ಶೆಟ್ಟಿ ಅವರಿಗೆ ಕೇವಲ ಅಭಿಮಾನ ಮಾತ್ರವಲ್ಲ, ಆಳವಾದ ಜ್ಞಾನವೂ ಇದೆ. ಜೊತೆ ಸಿಕ್ಕಾಗೆಲ್ಲ ಕ್ರಿಕೆಟ್ ಬಗ್ಗೆ ಚರ್ಚಿಸುತ್ತೇವೆ. ಕೆಲವೊಮ್ಮೆ ವಾದವನ್ನೂ ಮಾಡುತ್ತೇವೆ ಎಂದು ಭಾವೀ ಮಾವನ ಬಗ್ಗೆ ರಾಹುಲ್ ಮಾತನಾಡಿದ್ದಾರೆ.
ಸುನಿಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಅವರೊಂದಿಗೆ ಕಳೆದ ಕೆಲವು ಸಮಯಗಳಿಂದ ಕೆ.ಎಲ್. ರಾಹುಲ್ ಸುದ್ದಿಯಲ್ಲಿದ್ದಾರೆ. ವ್ಯಾಲೆಂಟೈನ್ಸ್ ಡೇಯಂದು ಇಬ್ಬರು ಜೊತೆಗಿರುವ ಫೋಟೋವನ್ನುಸಾಮಾಜಿಕ ತಾಣದಲ್ಲಿ ಹಂಚಿಕೊಂಡು ಎಲ್ಲಾ ಗುಸುಗುಸುಗಳಿಗೆ ತೆರೆ ಎಳೆದು ತಾವಿಬ್ಬರು ಪ್ರೇಮಿಗಳು ಎಂಬುದನ್ನು ಅಧಿಕೃತಗೊಳಿಸಿದ್ದರು.
ಕೆಲ ಸಮಯದ ಹಿಂದೆ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಮೊದಲ ಚಿತ್ರ 'ತಡಪ್'ನ ಸ್ಕ್ರೀನಿಂಗ್ಗೆ ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬಹಿರಂಗವಾಗಿ ಈರ್ವರೂ ಜತೆಯಾಗಿ ಕಾಣಿಸಿಕೊಂಡಿದ್ದು ಅದೇ ಮೊದಲಾಗಿತ್ತು.