ಮುಂಬೈ , ಏ 02 (DaijiworldNews/DB): ನಟ ಸೈಫ್ ಅಲಿಖಾನ್ ಅವರಿಗೆ ಮಕ್ಕಳ ಕುರಿತಾಗಿ ಅತೀವ ಕಾಳಜಿ. ದಶಕಕ್ಕೊಂದರಂತೆ ನಾಲ್ಕು ಮಕ್ಕಳ ತಂದೆಯಾದ ಖ್ಯಾತಿ ಅವರದು. ಆದರೆ, ಇನ್ನು ಮಕ್ಕಳು ಸಾಕು ಎಂಬುದಾಗಿ ಅವರ ಪತ್ನಿ ಕರೀನಾ ಕಫೂರ್ ಖಡಕ್ಕಾಗಿ ಹೇಳಿದ್ದಾರಂತೆ.
ಸೈಫ್ ಅಲಿಖಾನ್ ಮತ್ತು ಅಮೃತಾ ಸಿಂಗ್ ಅವರಿಗೆ ಸಾರಾ ಅಲಿಖಾನ್ ಮತ್ತು ಇಬ್ರಾಹಿಂ ಅಲಿಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬಳಿಕ ಅಮೃತಾ ಸಿಂಗ್ ಗೆ ವಿಚ್ಚೇದನ ನೀಡಿ ಸೈಫ್ ಕರೀನಾ ಕಫೂರ್ ರನ್ನು ವರಿಸಿದ್ದರು. ಈ ಜೋಡಿಗೆ ತೈಮೂರ್ ಮತ್ತು ಜೆಹ್ ಇಬ್ಬರು ಮಕ್ಕಳಿದ್ದಾರೆ. ಸೈಫ್ ಮೊದಲ ಬಾರಿ ಸಾರಾಗೆ ತಂದೆಯಾದಾಗ ಅವರಿಗೆ ಕೇವಲ 23 ವರ್ಷವಾಗಿತ್ತಂತೆ. ಪ್ರಸ್ತುತ ಅವರಿಗೆ 51 ವರ್ಷವಾಗಿದ್ದು, ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಪ್ರತಿ ದಶಕಕ್ಕೆ ಒಂದೊಂದು ಮಗುವಿನ ತಂದೆಯಾದ ಹೆಗ್ಗಳಿಕೆ ಅವರದು. ಆದರೆ, ನಾಲ್ಕು ಮಕ್ಕಳನ್ನು ಪಡೆದಿರುವ ಸೈಫ್ ಗೆ ಇನ್ನು ಮುಂದೆ ಮಕ್ಕಳನ್ನು ಪಡೆಯುವುದು ಬೇಡ ಎಂದು ಪತ್ನಿ ಕರೀನಾ ಎಚ್ಚರಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂದ ಹಾಗೆ, ಸಂದರ್ಶನವೊಂದರಲ್ಲಿ ಕರೀನಾ ಈ ಎಚ್ಚರಿಕೆ ನೀಡಿದ್ದರು. ಮೊದಲ ಪತ್ನಿಯ ಮಕ್ಕಳನ್ನೂ ತೈಮೂರ್ ಮತ್ತು ಜೆಹ್ ನಂತೆಯೇ ಸೈಫ್ ಮತ್ತು ಕರೀನಾ ಪ್ರೀತಿಸುತ್ತಾರೆ. ಸೈಫ್ ಗೆ ಮಕ್ಕಳೆಂದರೆ ಅತೀವ ಕಾಳಜಿ. ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ ಎಂದಿದ್ದರು ಕರೀನಾ. ಆದರೆ ಇನ್ನು ಮಕ್ಕಳು ಸಾಕು ಎಂಬ ಕರೀನಾ ಎಚ್ಚರಿಕೆಯ ಹಿಂದೆ ಸೈಫ್ ಇನ್ನಷ್ಟು ಮಕ್ಕಳನ್ನು ಪಡೆಯಲು ಬಯಸಿದ್ದರೇ ಎಂಬುದನ್ನು ಮಾತ್ರ ಸ್ವತಃ ಕರೀನಾ ಅವರೇ ಸ್ಪಷ್ಟಪಡಿಸಬೇಕು.