ಲಾಸ್ ಏಂಜಲೀಸ್, ಮಾ 28 (DaijiworldNews/MS): 94ನೇ ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದ್ದು, ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಆದರೆ ಈ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಘಟನೆಯೊಂದು ನಡೆದಿದೆ.
ಕಾರ್ಯಕ್ರಮದ ನಿರೂಪಕ ತನ್ನ ಪತ್ನಿಯನ್ನು ಹೀಯಾಳಿಸಿದ ಎಂಬ ಕಾರಣಕ್ಕಾಗಿ ನಟ ವಿಲ್ ಸ್ಮಿತ್ ಕೋಪಗೊಂಡು ವೇದಿಕೆ ಮೇಲೆಯೇ ನಿರೂಪಕನ ಕಪಾಳಕ್ಕೆ ಹೊಡೆದಿದ್ದಾರೆ. ಮೊದಲು ಇದು ಕಾರ್ಯಕ್ರಮದ ಭಾಗವಾಗಿ ಈ ಸ್ಕ್ರಿಪ್ಟ್ ಮಾಡಲಾಗಿದೆಯಾ ಎಂಬ ಅನುಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರೂ, ಇದೊಂದು ನೈಜ ಘಟನೆ ಎಂದು ಹೇಳಲಾಗುತ್ತಿದೆ.
ನಿರೂಪಕ ಕ್ರಿಸ್ ರಾಕ್ ಅವರು, ನಟ ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಅವರನ್ನು ಉದ್ದೇಶಿಸಿ " ನೀವು ಬೋಳು ತಲೆಯಲ್ಲಿ ನಟಿಸಿದ ಸಿನಿಮಾ ಜಿಐ ನೋಡಲು ಇಷ್ಟಪಡುತ್ತೇನೆ" ಎಂದು ಹೇಳಿದ್ದಾಗ ಇಡೀ ಸಭಾಂಗಣ ಗೊಳ್ಳೆಂದು ನಕ್ಕಿದೆ. ಕ್ರಿಸ್ ರಾಕ್ರ ಈ ತಮಾಷೆಯಿಂದ ಕೋಪಗೊಂಡ ವಿಲ್ ಸ್ಮಿತ್ ವೇದಿಕೆಯ ತೆರಳಿ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದಿದ್ದಾರೆ. ಅದರೂ ಕಾರ್ಯಕ್ರಮದ ಭಾಗವೇ ಇದು ಅಂದುಕೊಂಡಿದ್ದರು. ಆದರೆ ವಿಲ್ ಸ್ಮಿತ್ ಬಳಿಕ 'ನನ್ನ ಹೆಂಡತಿಯ ಹೆಸರನ್ನು ನಿಮ್ಮ ಬಾಯಲ್ಲಿ ಹೇಳಬೇಡಿ' ಎಂದು ಎಚ್ಚರಿಕೆ ನೀಡಿದ್ದಾರೆ. ವಿಷಯದ ಗಂಭೀರತೆ ಕೆಲವರಿಗೆ ಆಗ ಅರ್ಥವಾಗಿದೆ. ಇದರಿಂದ ಕೆಲಹೊತ್ತು ಕಾರ್ಯಕ್ರಮದಲ್ಲಿ ಗಲಿಬಿಲಿ ಉಂಟಾಗಿದೆ.
ಇನ್ನು ವಿಲ್ ಸ್ಮಿತ್ರ ಪತ್ನಿ ಜಡಾ ಪಿಂಕೆಟ್ ಅಲೋಪೆಸಿಯಾ ಎಂಬ ಕಾಯಿಲೆಗೆ ತುತ್ತಾಗಿದ್ದು, ಈ ಕಾರಣಕ್ಕಾಗಿ ಅವರು ತಮ್ಮ ಕೂದಲನ್ನು ಕತ್ತರಿಸಿದ್ದಾರೆ. ಇದನ್ನು ಅರಿಯದ ನಿರೂಪಕ ಕ್ರಿಸ್ ರಾಕ್ ಸಿನಿಮಾಕ್ಕಾಗಿ ಕೂದಲು ಕತ್ತರಿಸಿಕೊಂಡಿದ್ದಾರೆ ಎಂದು ತಮಾಷೆ ಮಾಡಿ ಕಪಾಲಮೋಕ್ಷ ಮಾಡಿಸಿಕೊಂಡಿದ್ದಾರೆ. ಕ್ರಿಸ್ ರಾಕ್ಗೆ ವಿಲ್ ಸ್ಮಿತ್ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಲ್ ಸ್ಮಿತ್ ಕಿಂಗ್ ರಿಚರ್ಡ್ಸ್ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಸ್ಮಿತ್ ಅಕಾಡೆಮಿಗೆ ಕ್ಷಮೆ ಕೇಳಿದರು. ಅಲ್ಲದೆ ಸಹ ಕಲಾವಿದರಿಗೂ ಕ್ಷಮೆಯಾಚಿಸಿದರೂ ನೇರವಾಗಿ ರಾಕ್ ಅವರಿಗೆ ನೇರವಾಗಿ ಕ್ಷಮೆ ಕೇಳಿಲ್ಲ ಎಂದು ವರದಿಯಾಗಿದೆ.