ಬೆಂಗಳೂರು, ಮಾ 23 (DaijiworldNews/HR): ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಕನ್ನಡದಲ್ಲಿ ಡಬ್ ಆಗಿದ್ದರೂ ಕೂಡ ಕರ್ನಾಟಕದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಯಾವುದೇ ಥಿಯೇಟರ್ ಕೂಡ ಕನ್ನಡ ಡಬ್ಬಿಂಗ್ ಚಿತ್ರಕ್ಕೆ ಕೊಟ್ಟಿಲ್ಲವೆಂದು ಎರಡು ದಿನಗಳಿಂದ 'ಬೈಕಾಟ್ ಆರ್.ಆರ್.ಆರ್' ಹೋರಾಟ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ.
ಕನ್ನಡ ಪರ ಕೆಲ ಹೋರಾಟಗಾರರು ಡಬ್ಬಿಂಗ್ ಪರ ಒಲವು ತೋರಿರುವ ಕನ್ನಡಿಗರ ‘ಆರ್.ಆರ್.ಆರ್’ ಸಿನಿಮಾ ಕನ್ನಡದಲ್ಲೇ ಬೇಕು ಎಂದು ಹೇಳಿದ್ದರು.
ಇನ್ನು ಕನ್ನಡದಲ್ಲೇ ಆರ್.ಆರ್.ಆರ್ ನೋಡುತ್ತೇವೆ. ಬೇರೆ ಭಾಷೆಯಲ್ಲಿರುವ ಚಿತ್ರವನ್ನು ತಿರಸ್ಕರಿಸುತ್ತೇವೆ ಎಂದು ಅನೇಕ ಕನ್ನಡಿಗರು ಪೋಸ್ಟ್ ಮಾಡಿದ್ದು, ಇದು ಮತ್ತಷ್ಟು ಜೋರಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ವಿತರಣಾ ಹಕ್ಕು ಪಡೆದಿರುವ ಕೆ.ವಿ.ಎನ್ ಸಂಸ್ಥೆಯು ತುಂಬಾ ಉತ್ತರವನ್ನು ಕೊಟ್ಟಿದ್ದು, ಆರ್.ಆರ್.ಆರ್ ಸಿನಿಮಾವನ್ನು ಕನ್ನಡದಲ್ಲಿ ನೋಡಲು ನೀವೇ ನಮಗೆ ಸಹಾಯ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರರಿಗೆ ಈ ಜವಾಬ್ದಾರಿ ನೀಡಿದೆ.
ಈ ಬಗ್ಗೆ ಡಬ್ಬಿಂಗ್ ಪರ ಹೋರಾಟಗಾರರಿಗೆ ಕೆ.ವಿ.ಎನ್ ಸಂಸ್ಥೆ ಪತ್ರ ಬರೆದಿದ್ದು, ಆರ್.ಆರ್.ಆರ್ ನಾಯಕ ನಟರಾದ ರಾಮ್ ಚರಣ್ ಮತ್ತು ಜ್ಯೂ.ಎನ್.ಟಿ.ಆರ್ ಕನ್ನಡ ಕಲಿಯಲು ವಿಶೇಷ ಪ್ರಯತ್ನಗಳನ್ನು ಮಾಡಿ, ಮೊದಲ ಬಾರಿಗೆ ತಮ್ಮದೇ ಧ್ವನಿಯಲ್ಲಿ ಡಬ್ ಮಾಡಿದ್ದಾರೆ. ನೀವು ಕನ್ನಡ ಭಾಷೆಯಲ್ಲಿ ಈ ಮಹೋನ್ನತ ದೃಶ್ಯಕಾವ್ಯವನ್ನು ನೋಡಲು ಇಷ್ಟಪಡುತ್ತೀರಿ ಎಂದು ನಾವು ಭಾವಿಸಿದ್ದೇವೆ. ಆದ್ದರಿಂದ ಆರ್.ಆರ್.ಆರ್ ಸಿನಿಮಾವನ್ನು ಕನ್ನಡದ ಅವತರಣಿಕೆಯನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವ ಥಿಯೇಟರ್ ಮಾಲೀಕರ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ನಾಳೆಯೊಳಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದೆ.