ಬೆಂಗಳೂರು, ಮಾ 13 (DaijiworldNews/DB): ಕರಾವಳಿಯ ಚೆಲುವೆ, ಜೀ ಕನ್ನಡ ವಾಹಿನಿಯ ಜನಪ್ರಿಯ 'ಜೊತೆ ಜೊತೆಯಲಿ' ಧಾರಾವಾಹಿ ನಟಿ ಮೇಘಾ ಶೆಟ್ಟಿಗೆ ಅದೃಷ್ಟ ತಾನಾಗೇ ಖುಲಾಯಿಸುತ್ತಿದೆ. ಸಣ್ಣ ವಯಸ್ಸಿನಲ್ಲೇ ನಟಿಯಾದ ಮೇಘಾ, ಇದೀಗ ನಿರ್ಮಾಪಕಿಯಾಗಿ ಗಮನ ಸೆಳೆಯಲಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಶುರುವಾಗುವ ’ಕೆಂಡ ಸಂಪಿಗೆ’ ಧಾರಾವಾಹಿಗೆ ಮೇಘಾ ಶೆಟ್ಟಿ ಹಣ ಹೂಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇನು ಧಾರವಾಹಿ ನಟಿಯಾಗಿದ್ದವರು, ಧಾರವಾಹಿ ನಿರ್ಮಾಣ ಮಾಡುವಷ್ಟು ಎತ್ತರಕ್ಕೆ ಮೇಘಾ ಶೆಟ್ಟಿ ಬೆಳೆದು ಬಿಟ್ಟಿದ್ದಾರಾ? ಅದೃಷ್ಟ ಅಂದರೆ ಇದೇ ಅಲ್ಲವೇ ಎಂಬುದಾಗಿ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.
ಕಾಲೇಜು ಶಿಕ್ಷಣ ಮುಗಿದಂತೆಯೇ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಮೇಘಾ ಶೆಟ್ಟಿ ಮೊದಲ ಧಾರವಾಹಿಯಲ್ಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. 20 ವರ್ಷದ ಹುಡುಗಿ 45 ವರ್ಷದ ಮಧ್ಯ ವಯಸ್ಕನೊಂದಿಗೆ ಪ್ರೀತಿಯಲ್ಲಿ ಬೀಳುವ ಕಥಾಹಂದರ ಹೊಂದಿರುವ ’ಜೊತೆ ಜೊತೆಯಲಿ’ ಧಾರವಾಹಿಯಲ್ಲಿಅನು ಸಿರಿಮನೆ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನ ಗೆದ್ದಿದ್ದರು.
ಈ ಸೀರಿಯಲ್ ನಲ್ಲಿ ಮೇಘಾರ ಅದ್ಭುತ ನಟನೆಯಿಂದಾಗಿ ಕಡಿಮೆ ಸಮಯದಲ್ಲೇ ಹಿರಿತೆರೆಗೂ ಎಂಟ್ರಿಯಾಗಿದ್ದಾರೆ. ’ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ನಟಿಸುತ್ತಿದ್ದಾರೆ. ಆ ಮೂಲಕ ಮೇಘಾ ಶೆಟ್ಟಿ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿ ಇದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಆಫರ್ ಹೆಚ್ಚು ಬಂದರೂ ಧಾರಾವಾಹಿ ಜಗತ್ತನ್ನು ಅವರು ಬಿಟ್ಟು ಹೋಗುವುದಿಲ್ಲವಂತೆ.