ಮುಂಬೈ, ಫೆ 27 (DaijiworldNews/KP): ಭಾರತೀಯ ಚಿತ್ರರಂಗದಲ್ಲಿನ ಅತಿ ವಿವಾದಾತ್ಮಕ ನಟಿಯರ ಸಾಲಿನಲ್ಲಿ ಪೂನಂ ಪಾಂಡೆ ಹೆಸರು ಕೂಡ ಪ್ರಮುಖವಾಗಿ ಕೇಳಿಬರುತ್ತದೆ.
2013ರಲ್ಲಿ ‘ನಶಾ’ ಸಿನಿಮಾ ಮೂಲಕ ಪೂನಂ ಪಾಂಡೆ ಚಿತ್ರರಂಗಕ್ಕೆ ಕಾಲಿಟ್ಟರು. ವಿದ್ಯಾರ್ಥಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ಟೀಚರ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಆ ಚಿತ್ರದ ಬಿಡುಗಡೆ ಬಳಿಕ ಪೂನಂ ಪಾಂಡೆ ಬದುಕಿನಲ್ಲಿ ಕಷ್ಟ ಆವರಿಸಿತು.
ವೃತ್ತಿಜೀವನದಲ್ಲಿ ಅವರು ಅನೇಕ ಏಳು-ಬೀಳುಗಳನ್ನು ಕಂಡಿರುವ ಅವರು, ಖಾಸಗಿ ಜೀವನ ಕೂಡ ಹಾದಿ ತಪ್ಪಿದ್ದು, ಪತಿಯಿಂದ ಥಳಿತಕ್ಕೆ ಒಳಗಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಏರಬೇಕಾಯಿತು ಅಲ್ಲದೆ ಮದುವೆಯಾದ ಕೆಲವೇ ದಿನಗಳ ಬಳಿಕ ಗಂಡನಿಂದ ದೂರ ಆಗಬೇಕಾದ ದುಸ್ಥಿತಿ ಬಂದಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಇವರು ಅತಿ ಮಾದಕವಾದ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕಿರಿಕ್ಗಳು ಕೂಡ ಮಾಡಿಕೊಳ್ಳತ್ತಾರೆ. ಇದೀಗಾ ಪೂನಂ ಪಾಂಡೆ ಕಂಗನಾ ರಣಾವತ್ ನಡೆಸಿಕೊಡುವ ‘ಲಾಕಪ್’ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವ ಮೂಲಕ ಮತ್ತೆ ಸುದ್ದಿಯಲ್ಲಿ ಇದ್ದಾರೆ.
ಫೆ.27ರಿಂದ ಆಲ್ಟ್ ಬಾಲಾಜಿ ಮತ್ತು ಎಂಎಕ್ಸ್ ಪ್ಲೇಯರ್ ಮೂಲಕ ‘ಲಾಕಪ್’ ಶೋ ಪ್ರಸಾರ ಆಗಲಿದ್ದು, ಹಲವು ವಿವಾದಾತ್ಮಕ ವ್ಯಕ್ತಿಗಳೇ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿದ್ದಾರೆ.
ಈ ಕುರಿತು ಮಾತನಾಡಿದ ಪೂನಂ ಪಾಂಡೆ ಜನರು ನನ್ನನ್ನು ಕೇವಲ ವಿವಾದಗಳಿಂದ ಜಡ್ಜ್ ಮಾಡುತ್ತಾರೆ. ನನ್ನ ಬದುಕಿನಲ್ಲಿ ಏನು ನಡೆದಿದೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪೂನಂ ಪಾಂಡೆ ಅವರು ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ನನಗೆ ಕೆಲಸ ಇಲ್ಲದೇ ಇದ್ದಾಗ ವಿವಾದಗಳನ್ನು ಮಾಡಿಕೊಂಡೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಕೆಲಸ ಮಾಡಬೇಕು ಅಂತ ಬಯಸಿದ್ದೇನೆ. ಭವಿಷ್ಯ ಕಟ್ಟಿಕೊಳ್ಳಲು ಅದು ಮಾಡು, ಇದು ಮಾಡು ಅಂತ ಹೇಳಿದವರ ಎಲ್ಲ ಮಾತನ್ನೂ ನಾನು ಕೇಳಿದೆ. ಆದರೆ ಅದು ತಪ್ಪು ಎಂಬುದು ನನಗೆ ನಂತರ ಅರಿವಾಯಿತು. ಜೀವನದಲ್ಲಿ ಯಶಸ್ವಿ ಆಗಬೇಕು ಎಂದರೆ ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ಅದರಿಂದ ಇನ್ನಷ್ಟು ಕೆಲಸ ಸಿಗುತ್ತದೆ. ಜೀವನದಲ್ಲಿ 15 ನಿಮಿಷದ ಜನಪ್ರಿಯತೆ ಮುಖ್ಯ ಅಲ್ಲ. ಇನ್ಮುಂದೆ ನಾನು ಕೆಲಸ ಮಾಡಿ ತೋರಿಸುತ್ತೇನೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.
ಅಲ್ಲದೆ ಜನರು ನನ್ನನ್ನು ತಪ್ಪಾದ ರೀತಿಯಲ್ಲಿ ಜಡ್ಜ್ ಮಾಡುತ್ತಿದ್ದರು. ನಟಿಯಾಗಿ ನಟನೆ, ಡ್ಯಾನ್ಸ್ ಮತ್ತು ನನ್ನ ಪ್ರತಿಭೆಯನ್ನು ತೋರಿಸಲು ನಾನು ಬಯಸಿದ್ದೆ. ಆದರೆ ಕೆಲವರು ನನ್ನನ್ನು ತಪ್ಪು ದಾರಿಗೆ ಎಳೆದರು ಎಂದು ಹೇಳಿದ್ದಾರೆ.