ಹೈದರಬಾದ್, ಫೆ 26 (DaijiworldNews/KP): ಸಿನಿಮಾಗಳಲ್ಲಿ ಕೇವಲ ಪಕ್ಕದ ಮನೆಯ ಹುಡುಗಿ ಪಾತ್ರ ಮಾಡದೆ ಹಲವು ಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಎಲ್ಲರ ಗಮನ ಸೆಳೆದಿರುವ ದಕ್ಷಿಣ ಭಾರತದ ಜನಪ್ರಿಯ ನಾಯಕ ನಟಿ ಸಮಂತಾ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿ ಇಂದಿಗೆ 12 ವರ್ಷ ತುಂಬಿದೆ.
ಸಮಂತಾ ಅವರಿಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಇತ್ತೀಚಿನ ವರ್ಷಗಳಲ್ಲಂತೂ ಈ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಸಿನಿ ಪಯಣಕ್ಕೆ 12 ವರ್ಷ ತುಂಬಿದ ಖುಷಿಯಲ್ಲಿ ವಿಶೇಷ ಫೋಟೋ ಹಂಚಿಕೊಂಡು ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಸಮಂತಾಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.
ಗೌತಮ್ ವಾಸುದೇವ್ ಮೆನನ್ ಅವರು ನಿರ್ದೇಶನದ ‘ಏ ಮಾಯ ಚೇಸಾವೆ’ಯು ಸಮಂತಾ ಅವರ ಜೊತೆಯಾಗಿ ನಾಗ ಚೈತನ್ಯ ನಟಿಸಿದ ಈ ಚಿತ್ರವು 2010ರ ಫೆಬ್ರವರಿ 26ರಂದು ತೆರೆಗೆ ಬಂದಿದ್ದು, ಮೊದಲ ಸಿನಿಮಾದಲ್ಲೇ ಅವರು ಎಲ್ಲರ ಗಮನ ಸೆಳೆಯುವ ಮೂಲಕ ಬಣದ ಬದುಕಿಗೆ ಭದ್ರ ಬುನಾದಿ ಸಿಕ್ಕಂತಾಗಿತ್ತು.
ಅಲ್ಲದೆ ಈ ಸಿನೆಮಾ ನಟನೆಗಾಗಿ ಸಮಂತಾ ಅವರಿಗೆ ‘ಸಿನಿಮಾ ಅವಾರ್ಡ್’, ‘ಫಿಲ್ಮ್ ಫೇರ್ ಸೌತ್’, ‘ನಂದಿ ಅವಾರ್ಡ್ಸ್’ ಪ್ರಶಸ್ತಿಗಳು ಲಭ್ಯವಾಗಿತ್ತು. ಈ ಸಿನಿಮಾದಿಂದ ಸಮಂತಾ ಬಣ್ಣದ ಬದುಕು ಬದಲಾಯಿತು.
ಈ ಹನ್ನೆರಡು ವರ್ಷದ ಸವಿನೆನಪಿನ ಸಂದರ್ಭದಲ್ಲಿ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದ ಹೇಳಲು ಅಪೇಕ್ಷಿಸುತ್ತೇನೆ. ಸಿನಿಮಾ ಜೊತೆಗಿನ ನನ್ನ ಲವ್ಸ್ಟೋರಿ ಹೀಗೇ ಮುಂದುವರೆಯಲಿದೆ ಎನ್ನುವ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಹನ್ನೆರಡು ವರ್ಷಗಳ ವೃತ್ತಿ ಬದುಕಿನಲ್ಲಿ ಸಮಂತಾ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ, ಮಹಾನಟಿ, ಮರ್ಸಲ್, 24, ದೂಕುಡು,ರಂಗಸ್ಥಳಂ, ಸೂಪರ್ ಅಂತಹ ದೊಡ್ಡ ಹಿಟ್ ಸಿನೆಮಾದಲ್ಲಿ ನಟಿಸಿದ್ದಾರೆ.
ಇನ್ನು 2021ರಲ್ಲಿ ರಿಲೀಸ್ ಆದ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ಅವರು ರಾಜಿ ಪಾತ್ರದ ಮೂಲಕ ಮಿಂಚಿದರು. ಸಮಂತಾ ಬೋಲ್ಡ್ ಲುಕ್ ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದರು. ಆ ಬಳಿಕ ‘ಪುಷ್ಪ’ ಸಿನಿಮಾದ ‘ಹೂ ಅಂತಿಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಈಗ ಸಮಂತಾ ಬಳಿ ಹಲವು ಆಫರ್ಗಳಿವೆ. ಸಮಂತಾ ದಿನ ಕಳೆದಂತೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
‘ಶಾಕುಂತಲಂ’, ‘ಯಶೋಧಾ’ ಸೇರಿ ಕೆಲ ಸಿನಿಮಾಗಳಲ್ಲಿ ಸಮಂತಾ ನಟಿಸುತ್ತಿದ್ದಾರೆ. ಭಿನ್ನ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ನಟಿಯಾಗಿ ಮಾತ್ರವಲ್ಲದೆ, ‘ತೆಲುಗು ಬಿಗ್ ಬಾಸ್ ಸೀಸನ್ 4’ ಹಾಗೂ ‘ಸ್ಯಾಮ್ ಜ್ಯಾಮ್’ ಶೋಗಳನ್ನು ಸಮಂತಾ ನಿರೂಪಣೆ ಮಾಡಿದ್ದರು. ಕಳೆದ ವರ್ಷ ಪತಿ ನಾಗ ಚೈತನ್ಯ ಅವರಿಂದ ಸಮಂತಾ ದೂರವಾದರು. ಆದರೂ, ಅವರು ಕುಗ್ಗಲಿಲ್ಲ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಅವರು ಮಿಶ್ರಣ ಮಾಡಲಿಲ್ಲ. ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡರು.